ಸಾಧನಾ ಬ್ರಾಡ್ಕಾಸ್ಟ್ ಪ್ರಕರಣ : ಬಾಲಿವುಡ್ ನಟ ಅರ್ಷದ್ ವಾರ್ಸಿ ಸೇರಿದಂತೆ ಇತರರಿಗೆ ನಿಷೇಧ ವಿಧಿಸಿದ ಸೆಬಿ

Photo | Instagram/@arshad_warsi
ಹೊಸದಿಲ್ಲಿ : ಸಾಧನಾ ಬ್ರಾಡ್ಕ್ರಾಸ್ಟ್ ಷೇರುಗಳನ್ನು ಖರೀದಿಸುವಂತೆ ಹೂಡಿಕೆದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಯೂಟ್ಯೂಬ್ ಚಾನೆಲ್ನಲ್ಲಿ ದಾರಿತಪ್ಪಿಸುವ ವೀಡಿಯೊಗಳನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮಾರುಕಟ್ಟೆ ನಿಯಂತ್ರಕ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಬಾಲಿವುಡ್ ನಟ ಅರ್ಷದ್ ವಾರ್ಸಿ, ಅವರ ಪತ್ನಿ ಮಾರಿಯಾ ಗೊರೆಟ್ಟಿ ಮತ್ತು 57 ಇತರರಿಗೆ ಶೇರು ಮಾರುಕಟ್ಟೆಯಿಂದ 1ರಿಂದ 5 ವರ್ಷಗಳ ಅವಧಿಗೆ ನಿಷೇಧ ವಿಧಿಸಿದೆ.
ಇದಲ್ಲದೆ ಸೆಬಿ, ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಅವರಿಗೆ ತಲಾ 5 ಲಕ್ಷ ರೂ.ದಂಡ ವಿಧಿಸಿದೆ. ಅರ್ಷದ್ 41.70 ಲಕ್ಷ ರೂ.ಗಳ ಲಾಭವನ್ನು ಗಳಿಸಿದ್ದಾರೆ ಮತ್ತು ಅವರ ಪತ್ನಿ 50.35 ಲಕ್ಷ ರೂ.ಗಳ ಲಾಭವನ್ನು ಗಳಿಸಿದ್ದಾರೆ ಎಂದು ಸೆಬಿ ಗಮನಿಸಿದೆ.
ಇದರಲ್ಲಿ ಗೌರವ್ ಗುಪ್ತಾ, ರಾಕೇಶ್ ಕುಮಾರ್ ಗುಪ್ತಾ ಮತ್ತು ಮನೀಶ್ ಮಿಶ್ರಾ ಮಾಸ್ಟರ್ಮೈಂಡ್ಗಳು ಎಂದು ಸೆಬಿ ಹೇಳಿಕೊಂಡಿದೆ.
ಸಾಧನಾ ಬ್ರಾಡ್ಕಾಸ್ಟ್ ಷೇರುಗಳ ಬೆಲೆಯನ್ನು ಹೆಚ್ಚಿಸಲು ಜನರ ಗುಂಪೊಂದು ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹೊಂದಿರುವ ಯೂಟ್ಯೂಬ್ ವೀಡಿಯೊಗಳನ್ನು ಬಳಸಿದೆ ಎಂದು ಸೆಬಿ ಹೇಳಿದೆ. ಈ ವೀಡಿಯೊಗಳನ್ನು " The Advisor " ಮತ್ತು " Moneywise " ನಂತಹ ಜನಪ್ರಿಯ ಯೂಟ್ಯೂಬ್ ಚಾನೆಲ್ಗಳಿಗೆ ಅಪ್ಲೋಡ್ ಮಾಡಲಾಗಿದೆ ಮತ್ತು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವೀಡಿಯೊದಲ್ಲಿ ಕಂಪೆನಿಯು 5G ಪರವಾನಗಿಯನ್ನು ಹೊಂದಿದೆ. ಅದಾನಿ ಗ್ರೂಪ್ ಅದನ್ನು ಸ್ವಾಧೀನಪಡಿಸಿಕೊಳ್ಳಲಿದೆ ಮತ್ತು ಅಮೆರಿಕದ ಕಂಪೆನಿಯೊಂದರ ಜೊತೆ 1,100 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಲಾಗಿತ್ತು.







