ಅತ್ಯಾಚಾರ ಪ್ರಕರಣಗಳಲ್ಲಿ ಬೇಕಿದ್ದ ಸ್ವಘೋಷಿತ ದೇವಮಾನವ ವಿರೇಂದ್ರ ದೇವ್ ದೀಕ್ಷಿತ್ ಮೃತಪಟ್ಟಿದ್ದಾರೆ: ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ

ವಿರೇಂದ್ರ ಡಿಯೋ ದೀಕ್ಷಿತ್ (Photo: ETV Bharat)
ಹೊಸದಿಲ್ಲಿ: ಅತ್ಯಾಚಾರ ಪ್ರಕರಣಗಳಲ್ಲಿ ಬೇಕಿದ್ದ ಹಾಗೂ ತಮ್ಮ ರೋಹಿಣಿ ಆಶ್ರಮದಲ್ಲಿ ತಮ್ಮ ಶಿಷ್ಯೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿದ್ದ ಸ್ವಘೋಷಿತ ದೇವಮಾನವ ವಿರೇಂದ್ರ ದೇವ್ ದೀಕ್ಷಿತ್ 2023ರಲ್ಲಿ ಮೃತಪಟ್ಟಿದ್ದಾರೆ ಎಂದು ದಿಲ್ಲಿಯ ನ್ಯಾಯಾಲಯವೊಂದಕ್ಕೆ ಸಿಬಿಐ ತಿಳಿಸಿದೆ.
ನ್ಯಾಯಾಲಯಕ್ಕೆ ಈಗಾಗಲೇ ಈ ಕುರಿತು ಮಾಹಿತಿ ನೀಡಿರುವ ಸಿಬಿಐ, ಪ್ರಕರಣದ ರದ್ದತಿಗೆ ಕೋರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2017ರಂದು ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶದನ್ವಯ ವಿರೇಂದ್ರ ದೀಕ್ಷಿತ್ ವಿರುದ್ಧ ಸಿಬಿಐ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಇದರ ಬೆನ್ನಿಗೇ, ಪರಾರಿಯಾಗಿದ್ದ ಆತನ ವಿರುದ್ಧ 2018ರಲ್ಲಿ ಇಂಟರ್ ಪೋಲ್ ಬ್ಲೂ ನೋಟಿಸ್ ಅನ್ನು ಜಾರಿಗೊಳಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ವಿರೇಂದ್ರ ದೀಕ್ಷಿತ್ ಬೆನ್ನು ಬಿದ್ದಿದ್ದ ಸಿಬಿಐ, ಆತನನ್ನು ಹುಡುಕಿಕೊಂಡು ನೇಪಾಳದವರೆಗೂ ತೆರಳಿತ್ತು. ಆತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದೂ ಪ್ರಕಟಿಸಿತ್ತು.
ವಿರೇಂದ್ರ ಡಿಯೋ ದೀಕ್ಷಿತ್ ಮೃತಪಟ್ಟಿರುವ ಮಾಹಿತಿಯನ್ನು ಜನವರಿ 2025ರಲ್ಲಿ ಸಿಬಿಐನ ಹೈದರಾಬಾದ್ ಘಟಕ ಸ್ವೀಕರಿಸಿತ್ತು. ಇತ್ತೀಚೆಗೆ ಈ ಮಾಹಿತಿಯನ್ನು ದೃಢಪಡಿಸಲಾಗಿದ್ದು, ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
2023ರಲ್ಲಿ ವಿರೇಂದ್ರ ದೀಕ್ಷಿತ್ ಮೃತಪಟ್ಟಾಗ, ಆತನಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು ಎಂದು ಅವರು ಹೇಳಿದ್ದಾರೆ.







