"ಆರೋಪಿಗಳನ್ನು ವಿಚಾರಣೆಯಿಲ್ಲದೆ ಜೈಲಿನಲ್ಲಿಡುವಲ್ಲಿ ಯಶಸ್ವಿಯಾಗಿದ್ದೀರಿ" : ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಸುಪ್ರೀಂ ಕೋರ್ಟ್ (Photo credit: PTI)
ಹೊಸದಿಲ್ಲಿ : ಆರೋಪಿಗಳನ್ನು ವಿಚಾರಣೆಯಿಲ್ಲದೆ ವರ್ಷಗಳ ಕಾಲ ಜೈಲಿನಲ್ಲಿಡುವಲ್ಲಿ ನೀವು ಯಶಸ್ವಿಯಾಗಿದ್ದೀರಿ ಎಂದು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ವಿನೋದ್ ಚಂದ್ರನ್ ಅವರ ಪೀಠ, ಆರೋಪಿಗಳನ್ನು ವರ್ಷಗಳ ಕಾಲ ವಿಚಾರಣಾಧೀನ ಕೈದಿಗಳಾಗಿ ಇರಿಸುವ ಮೂಲಕ ಅವರಿಗೆ ಶಿಕ್ಷೆ ವಿಧಿಸುವಲ್ಲಿ ಜಾರಿ ನಿರ್ದೇಶನಾಲಯ ಯಶಸ್ವಿಯಾಗಿದೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ ಕಂಪೆನಿಗೆ ಸಂಬಂಧಿಸಿದಂತೆ ಜೆಎಸ್ಡಬ್ಲ್ಯೂ ಸ್ಟೀಲ್ ಪರಿಹಾರ ಯೋಜನೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧದ ಪರಿಶೀಲನಾ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ಕಮಿಟಿ ಆಫ್ ಕ್ರೆಡಿಟರ್ಸ್(CoC) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾ ಮೆಹ್ತಾ, ಜಾರಿ ನಿರ್ದೇಶನಾಲಯ 20,000 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿ ಸಂತ್ರಸ್ತರಿಗೆ ವಿತರಿಸಿದೆ ಎಂದು ಹೇಳಿದೆ. ವಸೂಲಿ ಮಾಡಿದ ಹಣವು ರಾಜ್ಯ ಖಜಾನೆಯಲ್ಲಿ ಉಳಿಯುವುದಿಲ್ಲ. ಅದನ್ನು ಆರ್ಥಿಕ ಅಪರಾಧಗಳ ಬಲಿಪಶುಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು.
ಆಗ ಸಿಜೆಐ ಶಿಕ್ಷೆಯ ಪ್ರಮಾಣ ಎಷ್ಟು ಎಂದು ಕೇಳಿದರು. ದಂಡದ ಅಪರಾಧಗಳಲ್ಲಿ ಶಿಕ್ಷೆಯ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ಮೆಹ್ತಾ ಹೇಳಿದರು. ಇದಕ್ಕೆ ಸಿಜೆಐ, “ಅವರು ಶಿಕ್ಷೆಗೊಳಗಾಗದಿದ್ದರೂ ಕೂಡ, ನೀವು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಅವರಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದೀರಿ” ಎಂದು ಹೇಳಿದರು.







