ಅಮೆರಿಕ | ಹಿಮ ಬಿರುಗಾಳಿಗೆ ತಲೆಕೆಳಗಾದ ವಿಮಾನ: ಏಳು ಮಂದಿ ಮೃತ್ಯು

ಮೈನೆ, ಅಮೆರಿಕ: ಇಲ್ಲಿನ ಬಂಗೋರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಮ ಬಿರುಗಾಳಿಯಿಂದ ವಿಮಾನ ತಲೆಕೆಳಗಾಗಿ ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಒಬ್ಬ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ ಎಂದು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಟಿಸಿದೆ.
ದ ಬಂಬಾರ್ಡಿಯರ್ ಚಾಲೆಂಜರ್ 600 ಖಾಸಗಿ ಬ್ಯುಸಿನೆಸ್ ಜೆಟ್ ನಲ್ಲಿ ಎಂಟು ಮಂದಿ ಪ್ರಯಾಣಿಕರಿದ್ದು, ರವಿವಾರ ರಾತ್ರಿ ಟೇಕಾಫ್ ಆಗುವ ವೇಳೆ ಈ ದುರಂತ ಸಂಭವಿಸಿದೆ. ನ್ಯೂಇಂಗ್ಲೆಂಡ್ ಮತ್ತು ಅಮೆರಿಕದ ಬಹುಭಾಗ ಭಾರಿ ಶೀತಗಾಳಿಯಿಂದ ತತ್ತರಿಸಿರುವ ನಡುವೆಯೇ ಈ ದುರಂತ ಸಂಭವಿಸಿದೆ. ಉತ್ತರ ಬೋಸ್ಟನ್ ನಿಂದ 200 ಮೈಲು ದೂರದ ಈ ಪಟ್ಟಣದ ವಿಮಾನ ನಿಲ್ದಾಣವನ್ನು ದುರಂತದ ಬಳಿಕ ಮುಚ್ಚಲಾಗಿದೆ. ದುರಂತ ಸಂಭವಿಸಿದ ವೇಳೆ ಭಾರಿ ಹಿಮಪಾತ ಇತ್ತು ಎಂದು ಹೇಳಲಾಗಿದೆ.
ವಿಮಾನ ಟೇಕಾಫ್ ಆಗುವ ಹಂತದಲ್ಲಿದ್ದಾಗ ತಲೆಕೆಳಗಾಗಿ ಬಿದ್ದು ಬೆಂಕಿ ಹತ್ತಿಕೊಂಡಿತು ಎಂದು ವಿಮಾನ ಸಂಚಾರ ನಿಯಂತ್ರಣ ವ್ಯವಸ್ಥೆಯ ದಾಖಲೀಕರಣದಿಂದ ತಿಳಿದುಬಂದಿದೆ. ರವಿವಾರ ರಾತ್ರಿ 7.45ಕ್ಕೆ ಈ ದುರಂತ ಸಂಭವಿಸಿದೆ.
ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಷನ್ ಮತ್ತು ನ್ಯಾಷನಲ್ ಟ್ರಾನ್ಸ್ಪೋರ್ಟೇಶನ್ ಸೇಫ್ಟಿ ಬೋರ್ಡ್ (NTSB) ತನಿಖೆ ನಡೆಸುತ್ತಿವೆ. ವಿಮಾನ ನಿರ್ಗಮನದ ವೇಳೆ ವಿಮಾನ ಅಪಘಾತಕ್ಕೀಡಾಗಿದ್ದು, ಬಳಿಕ ಬೆಂಕಿ ಹತ್ತಿಕೊಂಡಿತು ಎನ್ನುವುದು NTSBಯ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದೆರಡು ದಿನಗಳಲ್ಲಿ ಸಂಪೂರ್ಣ ತನಿಖೆ ನಡೆಸಿ ವಿವರ ನೀಡಲಾಗುವುದು ಎಂದು NTSB ಪ್ರಕಟನೆಯಲ್ಲಿ ತಿಳಿಸಿದೆ.







