ಭಾರೀ ಮಳೆಗೆ ದಿಲ್ಲಿಯಲ್ಲಿ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

Photo | ANI
ಹೊಸದಿಲ್ಲಿ: ಭಾರಿ ಮಳೆಯಾಗುತ್ತಿರುವ ನಡುವೆಯೇ ನೈಋತ್ಯ ದಿಲ್ಲಿಯ ಸತ್ಯ ನಿಕೇತನದಲ್ಲಿ ರವಿವಾರ ಕಟ್ಟಡವೊಂದು ಕುಸಿದುಬಿದ್ದಿದೆ. ಕಟ್ಟಡದೊಳಗೆ ಇದ್ದ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಧ್ಯಾಹ್ನ 1.30ರ ಸುಮಾರಿಗೆ ಕಟ್ಟಡ ಕುಸಿದಿರುವ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಬಂದಿದೆ. ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕನಿಷ್ಠ 12 ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ದಿಲ್ಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಸಮೀಪ ಸತ್ಯ ನಿಕೇತನ ಇದೆ. ಈ ಪ್ರದೇಶದಲ್ಲಿ ಹಲವು ಕಾಲೇಜು ವಿದ್ಯಾರ್ಥಿಗಳು ವಾಸಿಸುತ್ತಾರೆ.
ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಎನ್ಎಸ್ಯುಐ (NSUI) ಮತ್ತು ಎಐಎಸ್ಎ (AISA) ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಕೂಡ ಸ್ಥಳಕ್ಕೆ ತೆರಳುತ್ತಿದ್ದಾರೆ.
‘ನೈಋತ್ಯ ದಿಲ್ಲಿಯ ಸತ್ಯ ನಿಕೇತನ ಬಳಿ ಕಟ್ಟಡ ಕುಸಿದಿದೆ. ಮಧ್ಯಾಹ್ನ 1.30ರ ಸುಮಾರಿಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪರಿಸ್ಥಿತಿ ಸ್ಪಷ್ಟವಾದ ಬಳಿಕ ಹೆಚ್ಚಿನ ವಿವರಗಳನ್ನು ನೀಡಲಾಗುವುದು' ಎಂದು ದಿಲ್ಲಿ ಪೊಲೀಸರು ANIಗೆ ತಿಳಿಸಿದ್ದಾರೆ.
ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಇದ್ದರೂ, ಇದುವರೆಗೆ ಯಾವುದೇ ಸಾವುನೋವು ವರದಿಯಾಗಿಲ್ಲ.
ANI ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಕಟ್ಟಡ ಕುಸಿದ ಬಳಿಕ ಸ್ಥಳದಲ್ಲಿ ಅವಶೇಷಗಳ ರಾಶಿ ಬಿದ್ದಿರುವುದು ಕಂಡುಬಂದಿದೆ. ಕಟ್ಟಡದ ಸುತ್ತ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದೂ ವಿಡಿಯೋದಲ್ಲಿ ಸೆರೆಯಾಗಿದೆ.






