ತೀವ್ರ ಚಳಿ, ದಟ್ಟ ಮಂಜು: ಉತ್ತರ ಪ್ರದೇಶದ ಶಾಲೆಗಳಿಗೆ ಜನವರಿ 1ರವರೆಗೆ ರಜೆ

PC: PTI
ಲಕ್ನೋ: ಉತ್ತರ ಪ್ರದೇಶದಲ್ಲಿ ಮೈಕೊರೆಯುವ ಚಳಿ ಹಾಗೂ ಶೀತಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಚಳಿ ಹಾಗೂ ದಟ್ಟ ಮಂಜಿನ ಕಾರಣದಿಂದ 2026ರ ಜನವರಿ 1ರವರೆಗೆ ರಾಜ್ಯದ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇಡೀ ಉತ್ತರ ಭಾರತದಲ್ಲಿ ಚಳಿಗಾಳಿಯ ಹೊಡೆತಕ್ಕೆ ಮಕ್ಕಳು ಕಂಗಾಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಕ್ಕಳ ಸುರಕ್ಷತೆ ತಮ್ಮ ಆದ್ಯತೆ; ಮಕ್ಕಳ ರಕ್ಷಣೆಯಲ್ಲಿ ಯಾವುದೇ ಲೋಪಗಳಾದಲ್ಲಿ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 12ನೇ ತರಗತಿಯವರೆಗಿನ ಎಲ್ಲ ಶಾಲೆ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗಲಿದೆ. ಆದ್ದರಿಂದ ರಾಜ್ಯದ ಎಲ್ಲ ಐಸಿಎಸ್ಇ, ಸಿಬಿಎಸ್ಇ ಹಾಗೂ ಉತ್ತರ ಪ್ರದೇಶ ಶಿಕ್ಷಣ ಮಂಡಳಿಯ ಶಾಲೆಗಳು ಮುಚ್ಚಿರುತ್ತವೆ ಎಂದು ಪ್ರಕಟಣೆ ಹೇಳಿದೆ.
ಡಿಸೆಂಬರ್ 31ರವರೆಗೂ ರಾಜ್ಯಾದ್ಯಂತ ದಟ್ಟ ಮಂಜು ಮುಸುಕಿದ ವಾತಾವರಣ ಹಾಗೂ ಶೀತಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಕ್ರಮವಾಗಿ 15 ಡಿಗ್ರಿ ಹಾಗೂ 10 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.







