JNU ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ | 10 ವಿದ್ಯಾರ್ಥಿಗಳಿಂದ ದೂರು; ICCಯಿಂದ ತನಿಖೆ

ಸಾಂದರ್ಭಿಕ ಚಿತ್ರ | indiatoday
ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಪ್ರೊಫೆಸರ್ ವೊಬ್ಬರ ವಿರುದ್ಧ ಕನಿಷ್ಠ 10 ವಿದ್ಯಾರ್ಥಿಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯದ ಆಂತರಿಕ ದೂರು ಸಮಿತಿ (ICC) ತನಿಖೆ ಆರಂಭಿಸಿದೆ.
ಸುಮಾರು ಒಂದು ತಿಂಗಳ ಹಿಂದೆ ವಿದ್ಯಾರ್ಥಿಗಳು ದೂರುಗಳನ್ನು ಸಲ್ಲಿಸಿದ್ದಾರೆ. ಪ್ರೊಫೆಸರ್ ತಮ್ಮ ಕ್ಯಾಂಪಸ್ ನಿವಾಸದಲ್ಲಿ ಪಾರ್ಟಿ ಆಯೋಜಿಸಿ, ವಿದ್ಯಾರ್ಥಿಗಳನ್ನು ಅಲ್ಲಿಗೆ ಆಹ್ವಾನಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಪಾರ್ಟಿಗಳಲ್ಲಿ ಪ್ರೊಫೆಸರ್ ಅನುಚಿತ ಲೈಂಗಿಕ ಮಾತುಗಳು ಮತ್ತು ವರ್ತನೆ ತೋರುತ್ತಿದ್ದರು ಎಂದು ಆರೋಪಿಸಲಾಗಿದೆ.
ತರಗತಿಗಳಲ್ಲಿಯೂ ಪ್ರೊಫೆಸರ್ ಅಶ್ಲೀಲ ಮಾತುಗಳನ್ನಾಡುತ್ತಿದ್ದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಮೊದಲ ದೂರು ICCಗೆ ಸಲ್ಲಿಕೆಯಾದ ಬಳಿಕ ಹಲವು ಹಿರಿಯ ವಿದ್ಯಾರ್ಥಿಗಳು ದೂರು ನೀಡಿದ ವಿದ್ಯಾರ್ಥಿಗಳ ಬೆಂಬಲಕ್ಕೆ ಬಂದಿದ್ದಾರೆ. ಪ್ರೊಫೆಸರ್ ಅವರ ವರ್ತನೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಕೆಲವರು ಕೂಡ ಪ್ರೊಫೆಸರ್ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ.
ಸದ್ಯ ICC ಈ ಎಲ್ಲ ಆರೋಪಗಳನ್ನು ಪರಿಶೀಲಿಸುತ್ತಿದೆ. ಈ ಪ್ರಕರಣದ ಬಗ್ಗೆ JNU ಆಡಳಿತ ಮತ್ತು ಕುಲಪತಿಗಳ ಕಚೇರಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ.






