ಆರೆಸ್ಸೆಸ್ ಅಖಂಡ ಭಾರತವನ್ನು ರಕ್ಷಿಸುತ್ತಿದೆ: ಖ್ಯಾತ ಗಾಯಕ ಶಂಕರ್ ಮಹಾದೇವನ್ ಶ್ಲಾಘನೆ

Photo : twitter/RSSorg
ನಾಗಪುರ: ಆರೆಸ್ಸೆಸ್ ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ರಕ್ಷಿಸಿದೆ ಹಾಗೂ ಅಖಂಡ ಭಾರತ ಸಿದ್ಧಾಂತವನ್ನು ಸಂರಕ್ಷಿಸಿದೆ ಎಂದು ಗಾಯಕ ಶಂಕರ್ ಮಹಾದೇವನ್ ಹೇಳಿದ್ದಾರೆ.
ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘಆಯೋಜಿಸಿದ್ದ ವಾರ್ಷಿಕ ವಿಜಯ ದಶಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಂಕರ್ ಮಹಾದೇವನ್, ಸಂಘ ಪರಿವಾರವು ದೇಶಕ್ಕೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
"ನಾನೇನು ಹೇಳಲು ಸಾಧ್ಯ? ನಾನು ಕೇವಲ ನಿಮಗೆ ವಂದಿಸುತ್ತೇನೆ. ನಮ್ಮ ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯ ಹಾಗೂ ನಮ್ಮ ಅಖಂಡ ಭಾರತ ಸಿದ್ಧಾಂತವನ್ನು ಸಂರಕ್ಷಿಸುವಲ್ಲಿ ಬೇರೆಲ್ಲರಿಗಿಂತ ಆರೆಸ್ಸೆಸ್ ಕೊಡುಗೆ ಅಪಾರವಾಗಿದೆ" ಎಂದು ಅವರು ಪ್ರಶಂಸಿಸಿದ್ದಾರೆ.
ಅಲ್ಲದೆ ಆರೆಸ್ಸೆಸ್ ನ ವಾರ್ಷಿಕ ಕಾರ್ಯಕ್ರಮಕ್ಕೆ ಆಹ್ವಾನಿತನಾಗಿರುವುದಕ್ಕೆ ನಾನು ಅದೃಷ್ಟವಂತನಾಗಿದ್ದೇನೆ ಎಂದೂ ಅವರು ಹೇಳಿದ್ದಾರೆ. ಕಾರ್ಯಕ್ರಮದ ನಂತರ ಅವರು ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ.ಹಡ್ಗೇವಾರ್ ಅವರ ಸಮಾಧಿಗೂ ಭೇಟಿ ನೀಡಿದರು.
ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.







