ಉತ್ತರಪ್ರದೇಶ | ಪೊಲೀಸ್ ಎನ್ಕೌಂಟರ್ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಶಾರ್ಪ್ಶೂಟರ್ ನವೀನ್ ಕುಮಾರ್ ಮೃತ್ಯು

Photo | indianexpress
ಉತ್ತರಪ್ರದೇಶ : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಶಾರ್ಪ್ಶೂಟರ್ ನವೀನ್ ಕುಮಾರ್ನನ್ನು ಉತ್ತರಪ್ರದೇಶ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಮತ್ತು ದಿಲ್ಲಿ ಪೊಲೀಸರ ತಂಡ ಹಾಪುರ್ ಕೊತ್ವಾಲಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನವೀನ್ ಗ್ಯಾಂಗ್ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡೇಟಿನಿಂದ ಗಾಯಗೊಂಡಿದ್ದ ನವೀನ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಗ್ಯಾಂಗ್ನ ಇತರ ಸದಸ್ಯರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನವೀನ್ ಕುಮಾರ್ ವಿರುದ್ಧ ದಿಲ್ಲಿ, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಲ್ಲಿ ಸುಮಾರು 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿತ್ತು.
ʼಗಾಝಿಯಾಬಾದ್ ಜಿಲ್ಲೆಯ ಲೋನಿ ನಿವಾಸಿ ನವೀನ್ ಕುಮಾರ್, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಕ್ರಿಯ ಶಾರ್ಪ್ಶೂಟರ್ ಆಗಿದ್ದ. ಈತ ಗ್ಯಾಂಗ್ ಸದಸ್ಯ ಹಾಶಿಮ್ ಬಾಬಾ ಜೊತೆ ನಿಕಟವಾಗಿದ್ದ. ಕುಮಾರ್ ವಿರುದ್ಧ ದಿಲ್ಲಿ ಉತ್ತರ ಪ್ರದೇಶದಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ದರೋಡೆ ಮತ್ತು ಮೋಕಾ ಅಡಿಯಲ್ಲಿ 20 ಪ್ರಕರಣಗಳು ದಾಖಲಾಗಿತ್ತುʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.







