ಕೇರಳ ಸಿಎಂ ಹುದ್ದೆಗೆ ಶಶಿ ತರೂರ್? : ಕೇರಳ ಸಂಸದ ನೀಡಿದ ಉತ್ತರ ಹೀಗಿದೆ...

Photo: screengrab/x.com/ANI
ತಿರುವನಂತಪುರ: ಕೇರಳ ಸೇರಿದಂತೆ ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಮತಗಳ ಎಣಿಕೆ ಆರಂಭವಾಗಿದೆ. ಈ ಮಧ್ಯೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ ಎನ್ನುವ ಕುತೂಹಲ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ವಲಯದಲ್ಲಿ ಮೂಡಿದೆ.
ಮತಗಟ್ಟೆ ಸಮೀಕ್ಷೆಗಳು ಯುಡಿಎಫ್ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ನಿಚ್ಚಳವಾಗಿ ಬಿಂಬಿಸಿದ್ದು, ಇಂದಿನ ಫಲಿತಾಂಶ ಅದನ್ನು ದೃಢಪಡಿಸಲಿದೆ. ಬಳಿಕ ಗತವೈಭವ ಹೊಂದಿದ ಪಕ್ಷ ಯಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತದೆ ಎನ್ನುವ ಕುತೂಹಲ ಹೆಚ್ಚಿದೆ.
ಈ ಬಗ್ಗೆ ಪತ್ರಕರ್ತರು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ರವಿವಾರ ಪ್ರಶ್ನಿಸಿದರು. ತಾವು ಕೇರಳ ಸಿಎಂ ಆಗುತ್ತೀರಾ? ಎಂಬ ಪ್ರಶ್ನೆಗೆ ತರೂರ್ ಅವರು ನೀಡಿದ ಪ್ರತಿಕ್ರಿಯೆ ಹೀಗಿದೆ: "ನಾನು ಏನು ಹೇಳಬೇಕು ಎಂದು ನೀವು ಪ್ರಯತ್ನಿಸುತ್ತೀರಿ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಉತ್ತರ ಸ್ಪಷ್ಟವಾಗಿದೆ" ಎಂದು ಮಾರ್ಮಿಕವಾಗಿ ನುಡಿದರು.
ಇಷ್ಟಕ್ಕೇ ಸೀಮಿತವಾಗದೇ, ಕಾಂಗ್ರೆಸ್ ಪಕ್ಷ ಹೇಗೆ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂಬ ಪ್ರಕ್ರಿಯೆಯನ್ನು ವಿವರಿಸಿದರು. "ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ನಿಗದಿತ ಕ್ರಮವನ್ನು ಅನುಸರಿಸುತ್ತೇವೆ. ಚುನಾವಣೆ ಫಲಿತಾಂಶಗಳ ಬಳಿಕ, ಗೆದ್ದ ಶಾಸಕರು ಪಕ್ಷದ ಅಧ್ಯಕ್ಷರ ಪ್ರತಿನಿಧಿಯನ್ನು ಭೇಟಿ ಮಾಡುತ್ತಾರೆ. ಶಾಸಕರ ಇಚ್ಛೆ ಏನು ಎನ್ನುವುದನ್ನು ಅವರು ತಿಳಿದುಕೊಳ್ಳುತ್ತಾರೆ. ಆ ಪ್ರತಿನಿಧಿ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸುತ್ತಾರೆ ಹಾಗೂ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಆ ಬಳಿಕ ಅವರು ಯಾವುದೇ ಕಾನೂನು ಅಥವಾ ಮಿತಿಗಳಿಗೆ ಬದ್ಧರಾಗಿರಬೇಕಿಲ್ಲ. ಅವರು ಯಾರನ್ನು ಬಯಸುತ್ತಾರೋ ಅವರನ್ನು ಆಯ್ಕೆ ಮಾಡಬಹುದು. ನಿರ್ಧಾರ ಕೈಗೊಳ್ಳುವುದು ಅವರಿಗೆ ಬಿಟ್ಟದ್ದು" ಎಂದು ತರೂರ್ ವಿವರಿಸಿದರು.






