ಉಪವಾಸ ಮುಷ್ಕರ ನಡೆಸುತ್ತಿರುವ ರೈತ ನಾಯಕ ದಲ್ಲೇವಾಲ್ರನ್ನು ತಾತ್ಕಾಲಿಕ ಆಸ್ಪತ್ರೆಗೆ ಸ್ಥಳಾಂತರಿಸಿ : ಪಂಬಾಜ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

PC : PTI
ಹೊಸದಿಲ್ಲಿ : ಕಳೆದ 25 ದಿನಗಳಿಂದ ಉಪವಾಸ ಮುಷ್ಕರ ನಡೆಸುತ್ತಿರುವ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರ ಆರೋಗ್ಯಕ್ಕೆ ಪಂಜಾಬ್ ಸರಕಾರವೇ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಎಚ್ಚರಿಸಿದೆ.
ಅಲ್ಲದೆ, ದಲ್ಲೇವಾಲ್ ಅವರ ಆರೋಗ್ಯ ಸ್ಥಿತಿಯ ಕುರಿತು 24 ಗಂಟೆಗಳ ಕಾಲ ನಿಗಾ ವಹಿಸಬೇಕಾಗಿರುವುದರಿಂದ ಅವರನ್ನು ಖನೌರಿ ಗಡಿಯಲ್ಲಿರುವ ತಾತ್ಕಾಲಿಕ ಆಸ್ಪತ್ರೆಗೆ ವರ್ಗಾಯಿಸಲು ಪಂಜಾಬ್ ಸರಕಾರ ನಿರ್ಧಾರ ತೆಗೆದುಕೊಳ್ಳುವಂತೆ ಎಂದು ಅದು ಹೇಳಿದೆ.
ದಲ್ಲೇವಾಲ್ ಅವರು ಬಿದ್ದು 8-10 ನಿಮಿಷಗಳ ಕಾಲ ಪ್ರಜ್ಞೆ ಕಳೆದುಕೊಂಡ ಹಾಗೂ ವೈದ್ಯರು ಅವರ ಜೀವಕ್ಕೆ ಅಪಾಯವಿದೆ ಎಂದು ಹೇಳಿದ ದಿನದ ಬಳಿಕ ಸುಪ್ರೀಂ ಕೋರ್ಟ್ ಪಂಜಾಬ್ ಸರಕಾರಕ್ಕೆ ಈ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠ ಪಂಜಾಬ್ ಹಾಗೂ ಹರ್ಯಾಣದ ಖನೌರಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿರುವ ತಾತ್ಕಾಲಿಕ ಆಸ್ಪತ್ರೆಗೆ ದಲ್ಲೇವಾಲ್ ಅವರನ್ನು ಯಾಕೆ ಸ್ಥಳಾಂತರಿಸಿಲ್ಲ ಎಂದು ಪಂಜಾಬ್ ಸರಕಾರವನ್ನು ಪ್ರತಿನಿಧಿಸಿದ ಅಡ್ವೊಕೇಟ್ ಜನರಲ್ ಗುರ್ಮಿಂದ್ರ್ ಸಿಂಗ್ ಅವರನ್ನು ಪ್ರಶ್ನಿಸಿತು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿದಂತೆ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ದಲ್ಲೇವಾಲ್ ಅವರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ದಲ್ಲೇವಾಲ್ ಅವರು ಸಹಕರಿಸುತ್ತಿದ್ದಾರೆ. ಅವರಿಗೆ ಇಸಿಜಿ, ರಕ್ತ ಪರೀಕ್ಷೆ ಹಾಗೂ ಇತರ ಪರೀಕ್ಷೆಗಳನ್ನು ನಡೆಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸಿಂಗ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಇದಕ್ಕೆ ಪೀಠ, ದಲ್ಲೇವಾಲ್ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲು ಪಂಜಾಬ್ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕು. ಅವರ ಆರೋಗ್ಯ ಸ್ಥಿರತೆ ಕುರಿತು ಖಾತರಿ ನೀಡುವುದು ಸಾಂವಿಧಾನಿಕ ಕರ್ತವ್ಯ ಹಾಗೂ ಪಂಜಾಬ್ ಸರಕಾರದ ಜವಾಬ್ದಾರಿ. ಅವರ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಬೇಕು. ಇದಕ್ಕೆ ಅನುಗಣವಾಗಿ ವ್ಯವಸ್ಥೆ ಮಾಡಬೇಕು ಎಂದು ಪೀಠ ಹೇಳಿದೆ.
ದಲ್ಲೇವಾಲ್ ಅವರ ಆರೋಗ್ಯದ ಕುರಿತು ನಿಗಾ ವಹಿಸಲು ಪಂಜಾಬ್ನ ಮುಖ್ಯ ಕಾರ್ಯದರ್ಶಿ ವೈದ್ಯರ ತಂಡವೊಂದನ್ನು ರೂಪಿಸಿದ್ದಾರೆ ಎಂದು ಕೂಡ ಅಡ್ವೊಕೇಟ್ ಜನರಲ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣದ ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಿದ ನ್ಯಾಯಾಲಯ, ಈ ಬಗ್ಗೆ ಅಫಿಡಾವಿಟ್ ಸಲ್ಲಿಸುವಂತೆ ಪಂಜಾಬ್ನ ಮುಖ್ಯ ಕಾರ್ಯದರ್ಶಿ ಹಾಗೂ ತಾತ್ಕಾಲಿಕ ಆಸ್ಪತ್ರೆಯ ವೈದ್ಯಾಧಿಕಾರಿಗೆ ಸೂಚಿಸಿತು.







