ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ನೀಡಿದ್ದ ರಾಜೀನಾಮೆ ಅಂಗೀಕಾರ
Photo | PTI
ಹೊಸದಿಲ್ಲಿ: ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ನೀಡಿದ್ದ ರಾಜೀನಾಮೆಯನ್ನು ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿಯು ಶುಕ್ರವಾರ ಅಂಗೀಕರಿಸಿದೆ.
ಚಂಡೀಗಢದಲ್ಲಿರುವ ಶಿರೋಮಣಿ ಅಕಾಲಿ ದಳ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅಮೃತಸರದಲ್ಲಿನ ಸಿಖ್ಖರ ಅತ್ಯುನ್ನತ ಧಾರ್ಮಿಕ ಪೀಠವಾದ ಅಕಾಲ್ ತಖ್ತ್ ಜಥೇದಾರ್ ಗಿಯಾನಿ ರಘಬೀರ್ ಸಿಂಗ್ ಅವರು ಡಿಸೆಂಬರ್ 2ರ ಸುಗ್ರೀವಾಜ್ಞೆಯನ್ನು ಶೀಘ್ರವಾಗಿ ಜಾರಿಗೆ ತರಲು ಶಿರೋಮಣಿ ಅಕಾಲಿ ದಳಕ್ಕೆ ಕೇಳಿಕೊಂಡ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.
ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳದ ಆಡಳಿತದಲ್ಲಿ ಮಾಡಿದ ತಪ್ಪುಗಳಿಗಾಗಿ ತಂಖೈಯಾ ಎಂದು ಘೋಷಿಸಲ್ಪಟ್ಟ ಸುಖಬೀರ್ ಸಿಂಗ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸುವಂತೆ ಡಿಸೆಂಬರ್ ನಲ್ಲಿ ಅಕಾಲ್ ತಖ್ತ್ ಶಿರೋಮಣಿ ಅಕಾಲಿ ದಳದ ಕಾರ್ಯಕಾರಿ ಸಮಿತಿಗೆ ಆದೇಶಿಸಿತ್ತು.
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಹುದ್ದೆಗೆ ಆರು ತಿಂಗಳೊಳಗೆ ಚುನಾವಣೆ ನಡೆಸಲು ಸಮಿತಿಯನ್ನು ಕೂಡ ರಚಿಸಲಾಗಿದೆ. ರಾಜೀನಾಮೆಯನ್ನು ಅಂಗೀಕರಿಸಿದ ನಂತರ, ಸುಖಬೀರ್ ಸಿಂಗ್ ಬಾದಲ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಬೆಂಬಲಕ್ಕಾಗಿ ಧನ್ಯವಾದವನ್ನು ಸಲ್ಲಿಸಿದ್ದಾರೆ. ʼಕಳೆದ ಐದು ವರ್ಷಗಳಲ್ಲಿ ಪಕ್ಷಕ್ಕೆ ಏನು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೇನೆ. ನನ್ನನ್ನು ಬೆಂಬಲಿಸಿದ ಕಾರ್ಯಕರ್ತರು ಮತ್ತು ಪಕ್ಷದ ಇತರ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆʼ ಎಂದು ಬಾದಲ್ ಹೇಳಿದ್ದಾರೆ.