Maharashtra | 38 ವರ್ಷಗಳ ಹಿಂದೆ ಪ್ರಕಟವಾದ 'ಶಿವಾಜಿ' ಪುಸ್ತಕದ ಪ್ರಕಾಶಕರ ನಾಲಿಗೆ ಕತ್ತರಿಸುತ್ತೇನೆ ಎಂದು ಬೆದರಿಕೆ ಒಡ್ಡಿದ ಶಿವಸೇನೆ ಶಾಸಕ!

ಸಂಜಯ್ ಗಾಯಕ್ವಾಡ್ | Photo Credit : Facebook/ Sanjay Gaikwad
ಮುಂಬೈ: 38 ವರ್ಷಗಳ ಹಿಂದೆ ಪ್ರಕಟವಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಕುರಿತ ಕೃತಿಯ ಮೂಲಕ ಅವರಿಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿರುವ ಶಿವಸೇನೆ ನಾಯಕ ಹಾಗೂ ಶಾಸಕ ಸಂಜಯ್ ಗಾಯಕ್ವಾಡ್, ಕೃತಿಯ ಪ್ರಕಾಶಕರಿಗೆ ನಾಲಿಗೆ ಕತ್ತರಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಈ ಬೆದರಿಕೆ ಕುರಿತು ಆರೋಪಿಸಿದ ಕೊಲ್ಹಾಪುರ ಮೂಲದ ಪ್ರಕಾಶಕ ಪ್ರಶಾಂತ್ ಅಂಬಿ, ಸಂಜಯ್ ಗಾಯಕ್ವಾಡ್ ಅವರದ್ದೆಂದು ಹೇಳಲಾದ ಆಡಿಯೊ ತುಣುಕನ್ನೂ ಹಂಚಿಕೊಂಡಿದ್ದಾರೆ. ಈ ಆಡಿಯೊ ತುಣುಕು ತನ್ನದೇ ಎಂದು ಸಂಜಯ್ ಗಾಯಕ್ವಾಡ್ ಕೂಡ ದೃಢಪಡಿಸಿದ್ದಾರೆ.
ಸಿಪಿಐ ನಾಯಕ ಹಾಗೂ ವಿಚಾರವಾದಿ ಗೋವಿಂದ್ ಪನ್ಸಾರೆ ಅವರು ‘ಶಿವಾಜಿ ಕೋನ್ ಹೋತಾ’ (ಶಿವಾಜಿ ಯಾರು?) ಎಂಬ ಕೃತಿಯನ್ನು ರಚಿಸಿದ್ದರು. 1988ರಲ್ಲಿ ಈ ಕೃತಿಯನ್ನು ಲೋಕವಾಂಗ್ಮಯ ಗೃಹ ಪ್ರಕಟಿಸಿತ್ತು.
ಇದು ಮರಾಠಿ ಸಾಹಿತ್ಯದಲ್ಲಿ ಮೈಲಿಗಲ್ಲು ಕೃತಿಯಾಗಿದ್ದು, ವ್ಯಾಪಕವಾಗಿ ಮಾರಾಟವಾಗಿದೆ. ಈ ಕೃತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಜಾತ್ಯತೀತ, ಜನಸಾಮಾನ್ಯರ ರಾಜನಾಗಿದ್ದರು ಎಂದು ಎತ್ತಿ ತೋರಿಸಲಾಗಿದೆ. ಈ ಕೃತಿಯ ಲಕ್ಷಾಂತರ ಪ್ರತಿಗಳು ಮಾರಾಟವಾಗಿದ್ದು, ಸುಮಾರು 75ಕ್ಕೂ ಹೆಚ್ಚು ಆವೃತ್ತಿಗಳು ಪ್ರಕಟಗೊಂಡಿವೆ.
ಮಧ್ಯರಾತ್ರಿಯ ಬಳಿಕ ಕರೆ ಮಾಡಿದ ಸಂಜಯ್ ಗಾಯಕ್ವಾಡ್, ನನ್ನೊಂದಿಗೆ ಸುಮಾರು ಒಂಭತ್ತು ನಿಮಿಷಗಳ ಕಾಲ ಮಾತನಾಡಿ, ಕೃತಿಯ ಶೀರ್ಷಿಕೆಯನ್ನು ಆಕ್ಷೇಪಿಸಿದರು ಹಾಗೂ ನನ್ನನ್ನು ನಿಂದಿಸಿದರು ಎಂದು ಪ್ರಶಾಂತ್ ಅಂಬಿ ಆರೋಪಿಸಿದ್ದಾರೆ.
ನನ್ನ ನಾಲಿಗೆಯನ್ನು ಕತ್ತರಿಸುವುದಾಗಿ ಬೆದರಿಕೆ ಒಡ್ಡಿದ ಸಂಜಯ್ ಗಾಯಕ್ವಾಡ್, ನನ್ನ ಮನೆಗೆ ನುಗ್ಗಿ ಹಲ್ಲೆ ನಡೆಸುವುದಾಗಿ ಹಾಗೂ “ನಿನಗೂ ಪನ್ಸಾರೆಯ ಗತಿಯೇ ಆಗುತ್ತದೆ” ಎಂದು ಬೆದರಿಸಿದರು ಎಂದೂ ಅವರು ಆರೋಪಿಸಿದ್ದಾರೆ.
2015ರಲ್ಲಿ ಕೊಲ್ಹಾಪುರದಲ್ಲಿ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ಗೋವಿಂದ್ ಪನ್ಸಾರೆಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಬಹಿರಂಗ ಗೂಂಡಾಗಿರಿಯಾಗಿದ್ದು, ವಿಷಯದ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಆಗ್ರಹಿಸಿದೆ.
ಪ್ರಶಾಂತ್ ಅಂಬಿ ದುರಹಂಕಾರಿಯಾಗಿದ್ದು, ಕೊಳಕು ಬಾಯಿಯ ವ್ಯಕ್ತಿ ಎಂದು ಬುಲ್ಧಾನಾ ಜಿಲ್ಲೆಯ ಶಾಸಕರಾದ ಸಂಜಯ್ ಗಾಯಕ್ವಾಡ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
“ಆತನ ನಾಲಿಗೆಯನ್ನು ಹೊಸಕಿ ಹಾಕಬೇಕು. ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡುವ ಇಂತಹ ಕೃತಿಗಳನ್ನು ನಾವು ಓದಲು ಸಾಧ್ಯವಿಲ್ಲ. ಈ ಕೃತಿಯನ್ನು ನಾಶ ಮಾಡಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಹಾಗೂ ಬಿಜೆಪಿ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್, ಸಂಜಯ್ ಗಾಯಕ್ವಾಡ್ ಹಳೆಯ ವಿವಾದಗಳನ್ನು ಕೆದಕಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಸಂಜಯ್ ಗಾಯಕ್ವಾಡ್ ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ. 2014ರಲ್ಲಿ ತಮ್ಮ ಕುತ್ತಿಗೆಯ ಸುತ್ತ ಹುಲಿ ಉಗುರನ್ನು ನೇತಾಕಿಕೊಂಡಿದ್ದ ಅವರು, “ನಾನು 1987ರಲ್ಲಿ ಹುಲಿಯನ್ನು ಬೇಟೆಯಾಡಿದ್ದೆ” ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ಕಳೆದ ವರ್ಷ ಶಾಸಕರ ವಸತಿ ಭವನದಲ್ಲಿ ಹಳಸಿದ ಆಹಾರ ನೀಡಲಾಗಿದೆ ಎಂದು ಕ್ಯಾಂಟೀನ್ ಸಿಬ್ಬಂದಿಯೊಬ್ಬರ ಕೆನ್ನೆಗೆ ಹೊಡೆದು ಮತ್ತೊಂದು ವಿವಾದ ಮಾಡಿಕೊಂಡಿದ್ದರು.






