ಟೈಗರ್ ಶ್ರಾಫ್ ಗೂ ಮುನ್ನ ಮತ್ತೊಬ್ಬ ಬಾಲಿವುಡ್ ತಾರೆಯೇ ಟಾರ್ಗೆಟ್!
ಇನ್ಸ್ಟಾಗ್ರಾಂ ಮೂಲಕ ನಟನ ಚಲನವಲನದ ಮಾಹಿತಿ ಸಂಗ್ರಹಿಸಿದ್ದ ಶೂಟರ್ ಗಳು

Photo Credit: indiatoday
ಮುಂಬೈ: ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶೂಟರ್ ಗಳು, ಆರಂಭದಲ್ಲಿ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿಯನ್ನು ಗುರಿಯಾಗಿಸಲು ಯೋಜಿಸಿದ್ದರು. ಆದರೆ, ಮುಂಬೈ ತಲುಪಿದ ಬಳಿಕ ಆ ಯೋಜನೆಯನ್ನು ಕೈಬಿಟ್ಟು ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ ಎಂದು India Today ವರದಿ ಮಾಡಿದೆ.
ಅಭಿಮಾನಿಗಳ ಪೋಸ್ಟ್ ಗಳು ಮತ್ತು ಇನ್ಸ್ಟಾಗ್ರಾಂ ಪೇಜ್ ಗಳ ಮೂಲಕ ಟೈಗರ್ ಶ್ರಾಫ್ ಅವರ ಚಲನವಲನದ ಮೇಲೆ ಆರೋಪಿಗಳು ನಿಗಾ ಇರಿಸಿದ್ದರು. ಅವರು ಪ್ರತಿ ರವಿವಾರ ಜುಹುವಿನ ಫುಟ್ ಬಾಲ್ ಮೈದಾನಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದರು. ಅಲ್ಲದೆ, ಸಾರ್ವಜನಿಕವಾಗಿ ಸಂಚರಿಸುವಾಗ ಅವರಿಗೆ ತುಲನಾತ್ಮಕವಾಗಿ ಕಡಿಮೆ ಭದ್ರತೆ ಇರುತ್ತದೆ ಎಂಬುದನ್ನು ಅರಿತಿದ್ದರು. ಹೀಗಾಗಿ, ಅವರನ್ನು ಸುಲಭದ ಗುರಿಯೆಂದು ಪರಿಗಣಿಸಿ ದಾಳಿಗೆ ಆಯ್ಕೆ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಅಮೆರಿಕದಿಂದ ಜಾಲ ನಿರ್ವಹಣೆ ಶಂಕೆ
ಅಮೆರಿಕದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾದ ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ ಈ ಪ್ರಕರಣದ ಪ್ರಮುಖ ಶಂಕಿತನಾಗಿದ್ದಾನೆ. ಒಂದು ಡಝನ್ ಗೂ ಹೆಚ್ಚು ಸುಲಿಗೆ ಪ್ರಕರಣಗಳು ಹಾಗೂ ದಿಲ್ಲಿ ಮತ್ತು ಹರಿಯಾಣದಲ್ಲಿ ನಡೆದ ನಿರ್ದಿಷ್ಟ ದಾಳಿಗಳೊಂದಿಗಿನ ಆತನ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಇಂತಹುದೇ ಘಟನೆಗಳಲ್ಲೂ ಆತನ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಹರಿಯಾಣದ ಪಾಣಿಪತ್ ಜಿಲ್ಲೆಯ ಮೂಲದ ಪಂಡಿತ್, ಅಮೆರಿಕದಿಂದ ತನ್ನ ಜಾಲವನ್ನು ನಿರ್ವಹಿಸುತ್ತಿದ್ದು, ಭಾರತದಲ್ಲಿರುವ ಶೂಟರ್ ಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾನೆ ಎಂಬ ಶಂಕೆಯಿದೆ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.
ಪಶ್ಚಿಮ ವಿಹಾರ್ ನಲ್ಲಿರುವ ಪಂಜಾಬಿ ಗಾಯಕ ಗುರು ರಾಂಧವ ಅವರಿಗೆ ಸಂಬಂಧಿಸಿದ ಜಿಮ್ ನ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಪಂಡಿತ್ ನ ಸಂಭಾವ್ಯ ಪಾತ್ರದ ಬಗ್ಗೆ ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಿಲ್ಲಿ-ಎನ್ಸಿಆರ್ ನಲ್ಲಿ ಸಕ್ರಿಯವಾಗಿರುವ ಶೂಟರ್ ಗಳ ಬಗ್ಗೆ ದಿಲ್ಲಿ ಪೊಲೀಸರ ವಿಶೇಷ ಘಟಕ ಮಾಹಿತಿ ಸಂಗ್ರಹಿಸುತ್ತಿದೆ. ಶೂಟರ್ ಗಳಿಗೆ ಪಂಡಿತ್ ನ ಜಾಲದೊಂದಿಗೆ ಸಂಪರ್ಕವಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಪ್ರಕರಣದ ವಿವಿಧ ಆಯಾಮಗಳ ತನಿಖೆಗಾಗಿ ಸುಮಾರು 10 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆದರಿಕೆ ಪೋಸ್ಟ್ ಪರಿಶೀಲನೆ
ಟೈಗರ್ ಶ್ರಾಫ್ ಮೇಲಿನ ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ಹಾಗೂ ಬಾಲಿವುಡ್ ಉದ್ಯಮಕ್ಕೆ ಬೆದರಿಕೆ ಹಾಕಿರುವುದಾಗಿ ಹೇಳಲಾದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿರುವವರ ಪಾತ್ರವನ್ನು ಪತ್ತೆಹಚ್ಚುವುದು, ಶಸ್ತ್ರಾಸ್ತ್ರಗಳ ಮೂಲವನ್ನು ಗುರುತಿಸುವುದು ಮತ್ತು ಶೂಟರ್ ಗಳಿಗೆ ಜಾಲದ ಮೂಲಕ ಹಣಕಾಸಿನ ನೆರವು ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪೊಲೀಸರ ಮುಂದಿರುವ ಪ್ರಮುಖ ಗುರಿಗಳಾಗಿವೆ ಎಂದು ತಿಳಿದು ಬಂದಿದೆ.






