ಜುಲೈ 14ರಂದು ಬಾಹ್ಯಾಕಾಶದಿಂದ ಮರುಪ್ರಯಾಣ ಆರಂಭಿಸಲಿರುವ ಶುಭಾಂಶು ಶುಕ್ಲಾ

ಶುಭಾಂಶು ಶುಕ್ಲಾ | PC : PTI
ಹೊಸದಿಲ್ಲಿ: ಬಾಹ್ಯಾಕಾಶ ಯಾನಿಗಳ ತಂಡದ ನಾಯಕ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ತಾಂತ್ರಿಕ ಸಿಬ್ಬಂದಿ ತಮ್ಮ ಭೂಮಿಗೆ ಮರಳುವ ಪಯಣವನ್ನು ಜುಲೈ 14ರಂದು ಆರಂಭಿಸಲಿದ್ದಾರೆ ಎಂದು ನಾಸಾ ಪ್ರಕಟಿಸಿದೆ.
"ಸ್ಟೇಷನ್ ಪ್ರೋಗ್ರಾಂ ಬಗ್ಗೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಆ್ಯಕ್ಸಿಯಮ್-4 ಪ್ರಗತಿಯನ್ನು ಜಾಗರೂಕವಾಗಿ ವೀಕ್ಷಿಸುತ್ತಿದ್ದೇವೆ. ಈ ಮಿಷನ್ ಸಮಾಪನಗೊಳಿಸುವುದು ಅಗತ್ಯ ಎನ್ನುವುದು ನಮ್ಮ ಭಾವನೆ; ಜುಲೈ 14ರಂದು ಸಮಾಪನೆಯ ಪ್ರಸ್ತುತ ಗುರಿ" ಎಂದು ನಾಸಾ ಕಮರ್ಷಿಯಲ್ ಕ್ರೂ ಪ್ರೋಗ್ರಾಂನ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ 14 ದಿನಗಳ ಮಿಷನ್ ನಲ್ಲಿ ತೆರಳಿದ್ದಾರೆ. ಇವರು ಐಎಸ್ಎಸ್ ಗೆ ಭೇಟಿ ನೀಡಿದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಳಿಕ ಬಾಹ್ಯಾಕಾಶ ಯಾನ ಕೈಗೊಂಡ ಎರಡನೇ ಭಾರತೀಯ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಶುಕ್ಲಾ ಅವರು ಭಾರತಕ್ಕೆ ಸಂಬಂಧಿಸಿದ ಏಳು ಪ್ರಯೋಗಗಳನ್ನು ನಡೆಸಿದ್ದು, ಆ್ಯಕ್ಸಿಯಮ್ 4 ಅಥವಾ ಮಿಷನ್ ಆಕಾಶಗಂಗಾ ಭಾರತದ ಮಾನವಸಹಿತ ಬಾಹ್ಯಾಕಾಶ ಮಿಷನ್ ಮೊದಲ ಹೆಜ್ಜೆಯಾಗಲಿದೆ. ಬಾಹ್ಯಾಕಾಶ ಮಿಷನ್ ಸಮಾಪನಾ ಪ್ರಕ್ರಿಯೆ ಆರಂಭದ ಹಲವು ಗಂಟೆಗಳ ಬಳಿಕ ಫೆಸಿಫಿಕ್ ಸಾಗರದ ಕ್ಯಾಲಿಫೋರ್ನಿಯಾ ಬಳಿ ಇಳಿಯುವ ನಿರೀಕ್ಷೆ ಇದೆ. ತಮ್ಮ ಮಿಷನ್ ಪೂರ್ಣಗೊಳಿಸಿ ಆಗಮಿಸುತ್ತಿರುವ ಶುಕ್ಲಾ ಬಗ್ಗೆ ಅತೀವ ಹೆಮ್ಮೆಯಾಗುತ್ತಿದೆ ಎಂದು ಪೋಷಕರು ಪ್ರತಿಕ್ರಿಯಿಸಿದ್ದಾರೆ.







