ಆಂಧ್ರ ಪ್ರದೇಶದಲ್ಲಿ 421 ಪೆಟ್ರೋಲ್ ಬಂಕ್ ಬಂದ್; ತುರ್ತು ಕ್ರಮಕ್ಕೆ ಚಂದ್ರಬಾಬು ನಾಯ್ಡು ಸೂಚನೆ

Photo Credit: PTI
ಅಮರಾವತಿ: ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ವರದಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಉಂಟಾದ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ರವಿವಾರ ಪರಿಶೀಲಿಸಿದರು.
ರವಿವಾರ ಬೆಳಗ್ಗೆ ಮಂಬೈಯಿಂದ ಅಮರಾವತಿಗೆ ತೆರಳುವ ಮುನ್ನ ಚಂದ್ರಬಾಬು ನಾಯ್ಡು ಅವರು, ಮುಖ್ಯ ಕಾರ್ಯದರ್ಶಿ ಸಾಯಿ ಪ್ರಸಾದ್ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ಟೆಲಿ ಕಾನ್ಫರೆನ್ಸ್ ನಡೆಸಿದರು.
ಮುಖ್ಯಮಂತ್ರಿ ಕಚೇರಿ (ಸಿಎಂಒ) ಪ್ರಕಾರ, ಅಧಿಕಾರಿಗಳು ಜಿಲ್ಲಾವಾರು ಪರಿಸ್ಥಿತಿಯನ್ನು ಮುಖ್ಯಮಂತ್ರಿ ಅವರಿಗೆ ವಿವರಿಸಿದ್ದಾರೆ. ರಾಜ್ಯದಲ್ಲಿರುವ ಒಟ್ಟು 4,510 ಪೆಟ್ರೋಲ್ ಬಂಕ್
ಗಳಲ್ಲಿ ಸುಮಾರು 421 ಪೆಟ್ರೋಲ್ ಬಂಕ್ ಗಳು ಇಂಧನ ಪೂರೈಕೆ ಕೊರತೆಯಿಂದ ತಾತ್ಕಾಲಿಕವಾಗಿ ಮುಚ್ಚಿವೆ.
ಹಿಂದಿನ ಮಟ್ಟಕ್ಕೆ ಹೋಲಿಸಿದರೆ, ಇಂಧನ ಪೂರೈಕೆ ಸುಮಾರು ಶೇ. 10ರಷ್ಟು ಹೆಚ್ಚಾಗಿದೆ. ಆದರೆ, ಜನರು ಆತಂಕದಿಂದ ಖರೀದಿ ಮಾಡುತ್ತಿರುವುದರಿಂದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ ಕೊರತೆ ನೀಗಿಸಲು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟವನ್ನು ದೂರ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






