ಉತ್ತರಪ್ರದೇಶ | ಸುಹೇಲ್ದೇವ್ ಸ್ವಾಭಿಮಾನ್ ಪಕ್ಷದ ನಾಯಕನಿಗೆ ವೇದಿಕೆಯಲ್ಲಿ ಹಾರ ಹಾಕಿ ಥಳಿಸಿದ ಕಾರ್ಯಕರ್ತ : ವೀಡಿಯೊ ವೈರಲ್

Photo | indiatoday
ಜೌನ್ಪುರ: ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ ಸುಹೇಲ್ದೇವ್ ಸ್ವಾಭಿಮಾನ್ ಪಕ್ಷದ(ಎಸ್ಎಸ್ಪಿ) ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜ್ಬರ್ ಅವರಿಗೆ ಪಕ್ಷದ ಕಾರ್ಯಕರ್ತನೋರ್ವ ವೇದಿಕೆಯ ಮೇಲೆ ಹಾರ ಹಾಕಿ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಲಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಶಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಫರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹೇಂದ್ರ ರಾಜ್ಬರ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಪಕ್ಷದ ಕಾರ್ಯಕರ್ತ ಬ್ರಿಜೇಶ್ ರಾಜ್ಬರ್ ಮೊದಲು ಮಹೇಂದ್ರ ರಾಜ್ಬರ್ ಅವರಿಗೆ ವೇದಿಕೆಯಲ್ಲಿ ಸ್ವಾಗತಿಸಿದರು. ಆ ಬಳಿಕ ಹಾರ ಹಾಕಿ ಅನೇಕ ಬಾರಿ ಥಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಘಟನೆಯನ್ನು ಖಂಡಿಸಿದ್ದಾರೆ. ಹಿಂದುಳಿದ ವರ್ಗದ ಜನರ ಮೇಲಿನ ದೌರ್ಜನ್ಯ ಮತ್ತು ಅವಮಾನದ ನಿದರ್ಶನ. ಘಟನೆಯ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಹಲ್ಲೆಯ ನಂತರ, ಮಹೇಂದ್ರ ರಾಜ್ಬರ್ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಮತ್ತು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್ಬರ್ ದಾಳಿಯ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಓಂ ಪ್ರಕಾಶ್ ರಾಜ್ಬರ್ ಅಥವಾ SBSP ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಕುರಿತು ಮಹೇಂದ್ರ ರಾಜ್ಬರ್ ಜಲಾಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.