ಹಾಸ್ಟೆಲ್ ನಲ್ಲಿ ನಿದ್ರಿಸುತ್ತಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ಹಾವು ಕಡಿತ: ಓರ್ವ ವಿದ್ಯಾರ್ಥಿನಿ ಮೃತ್ಯು

ಸಾಂದರ್ಭಿಕ ಚಿತ್ರ (AI)
ಲೊಹ್ರಾಗಢ (ಜಾರ್ಖಂಡ್): ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ನಿದ್ರಿಸುತ್ತಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ, 12 ವರ್ಷದ ಓರ್ವ ವಿದ್ಯಾರ್ಥಿನಿ ಮೃತಪಟ್ಟು, ಇತರ ಮೂವರು ವಿದ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಜಾರ್ಖಂಡ್ ನ ಲೊಹ್ರಾಗಢ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಕುರು ಪೊಲೀಸ್ ಠಾಣೆ ವ್ಯಾಪ್ತಿಯ ರೊಖೊ ಮಹುವಾತೋಲಿಯಲ್ಲಿನ ಸಾನ್ವಸಿರ ಪ್ರೌಢ ಶಿಕ್ಷಣ ವಸತಿ ಶಾಲೆಯ ಕೊಠಡಿಯೊಂದರಲ್ಲಿ ನಿದ್ರಿಸುತ್ತಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಚ್ಚಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕುರು ಪೊಲೀಸ್ ಠಾಣೆಯ ಉಸ್ತುವಾರಿ ಅಜಿತ್ ಕುಮಾರ್, “ನಾಲ್ವರು ವಿದ್ಯಾರ್ಥಿನಿಯರಿಗೆ ಹಾವು ಕಚ್ಚಿದ್ದು, ಈ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಇಬ್ಬರು ವಿದ್ಯಾರ್ಥಿನಿಯರಿಗೆ ಲೊಹ್ರಾಗಢ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮತ್ತೋರ್ವ ವಿದ್ಯಾರ್ಥಿನಿಯನ್ನು ರಾಂಚಿಯ ರಾಂಚಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ನಿಲಯಕ್ಕೆ ಹಾವು ಹೇಗೆ ಪ್ರವೇಶಿಸಿತು ಎಂಬುದು ತಿಳಿದಿಲ್ಲ ಎಂದೂ ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.






