ಮಹಾತ್ಮಾ ಅಯ್ಯಂಕಾಳಿಗೆ ಅವಮಾನ ; ದುಷ್ಕರ್ಮಿಗಳ ಪತ್ತೆಗೆ ಎಸ್ಐಟಿ ರಚನೆ: ಪಿಣರಾಯಿ

ಪಿಣರಾಯಿ ವಿಜಯನ್ | Photo: PTI
ತಿರುವನಂತಪುರಂ: 20ನೇ ಶತಮಾನದ ಪ್ರಸಿದ್ಧ ಸಮಾಜ ಸುಧಾರಕ ಮಹಾತ್ಮಾ ಅಯ್ಯಂಕಾಳಿಯನ್ನು ಅವಮಾನಿಸುವ ಬರಹಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವುದು ಯಾರು ಎನ್ನುವುದನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ.
ಪ್ರಸಿದ್ಧ ಸಮಾಜ ಸುಧಾರಕನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಹಾಕಿರುವುದು ಯಾರು ಎನ್ನುವುದನ್ನು ಪತ್ತೆಹಚ್ಚಲು ರಾಜ್ಯ ಸರಕಾರ ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಹಾಗೂ ಅಂಥವರ ವಿರುದ್ದ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಮಾಡಿದ ಆರೋಪಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸುತ್ತಿದ್ದರು.
ಅಯ್ಯಂಕಾಳಿಗೆ ಹಿಂದಿನಿಂದ ಅಥವಾ ಬಹಿರಂಗವಾಗಿ ಅವಮಾನ ಮಾಡುತ್ತಿರುವವರನ್ನು ಸರಕಾರ ಬಿಡುವುದಿಲ್ಲ ಎಂದು ವಿಜಯನ್ ಹೇಳಿದರು.
1863ರಲ್ಲಿ ಜನಿಸಿದ ಸಮಾಜ ಸುಧಾರಕ ಹಾಗೂ ರಾಜಕಾರಣಿ ಅಯ್ಯಂಕಾಳಿ 1941ರಲ್ಲಿ ನಿಧನರಾದರು. ಅವರು ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಏಳಿಗೆಗಾಗಿ ಶ್ರಮಿಸಿದರು.
ಪ್ರಸಿದ್ಧ ‘ವಿಳ್ಳುವಂಡಿ ಸಮರಮ್’ (ಎತ್ತಿನಗಾಡಿ ಪ್ರತಿಭಟನೆ)ನ್ನು ಅವಮಾನಿಸುವ ಬರಹಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿವೆ ಎಂದು ಮುಖ್ಯಮಂತ್ರಿ ಹೇಳಿದರು. ಕೆಳ ಜಾತಿಗಳ ಜನರ ನಡೆದಾಡುವ ಸ್ವಾತಂತ್ರಕ್ಕಾಗಿ ಅಯ್ಯಂಕಾಳಿ ಸಂಘಟಿಸಿದ ಪ್ರತಿಭಟನೆ ಅದಾಗಿತ್ತು. ಅಂದಿನ ದಿನಗಳಲ್ಲಿ ಕೆಳಜಾತಿಗಳ ಜನರು ಮೇಲ್ಜಾತಿಗಳ ಜನರು ಬಳುಸುವ ಅಥವಾ ಅವರ ನಿಯಂತ್ರಣದಲ್ಲಿದ್ದ ಸಾರ್ವಜನಿಕ ರಸ್ತೆಗಳಲ್ಲಿ ನಡೆಯವಂತಿರಲಿಲ್ಲ. ಅದನ್ನು ಪ್ರತಿಭಟಿಸಿ ಅಯ್ಯಂಕಾಳಿ ನೇತೃತ್ವದಲ್ಲಿ ಎತ್ತಿನಗಾಡಿ ಪ್ರತಿಭಟನೆ ನಡೆಸಲಾಗಿತ್ತು.







