ಜಮ್ಮು-ಕಾಶ್ಮೀರದಲ್ಲಿ ಸೈನಿಕರು ಇನ್ನೂ ಪ್ರಾಣ ತ್ಯಾಗ ಮಾಡುತ್ತಿದ್ದಾರೆ, 370 ನೇ ವಿಧಿ ರದ್ದತಿಗೆ ನಮ್ಮ ವಿರೋಧ ಸರಿಯಾಗಿದೆ: ಅಧೀರ್ ರಂಜನ್ ಚೌಧರಿ

Photo: PTI
ಹೊಸದಿಲ್ಲಿ: ಸೋಮವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಮಣಿಪುರದಲ್ಲಿ ಹಿಂಸಾಚಾರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಅಧಿಕಾರಿಗಳು ಪ್ರಾಣ ತ್ಯಾಗ ಮಾಡುತ್ತಿರುವ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
2019 ರಲ್ಲಿ ಆರ್ಟಿಕಲ್ 370 ರದ್ದತಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರು ಇನ್ನೂ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದಾರೆ. ವಿಧಿ 370ರ ರದ್ದತಿಗೆ ನಮ್ಮ ವಿರೋಧ ಸರಿಯಾಗಿದೆ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದರು.
ಇನ್ನು ಮುಂದೆ ಏನನ್ನೂ ವಿರೋಧಿಸುವ ಹಕ್ಕು ವಿರೋಧ ಪಕ್ಷಗಳಿಗೆ ಇಲ್ಲ ಎಂದು ಕಾಂಗ್ರೆಸ್ ಸಂಸದರು ತಿಳಿಸಿದ್ದಾರೆ.
ಒಂದು ಕಡೆ ಜಮ್ಮು ಹಾಗೂ ಕಾಶ್ಮೀರ ಹಾಗೂ ಮತ್ತೊಂದೆಡೆ, ಮಣಿಪುರ ಹೊತ್ತಿ ಉರಿಯುತ್ತಿದೆ., ಇದು ದೇಶದ ಭದ್ರತಾ ಪರಿಸ್ಥಿತಿಗೆ ಬಂದಾಗ "ಇನ್ನಷ್ಟು ಹೆಚ್ಚು ಕೆಲಸ ಮಾಡಬೇಕಾಗಿದೆ" ಎಂಬುದನ್ನು ಸೂಚಿಸುತ್ತದೆ ಎಂದರು.
ಈ ಹಿಂದೆ, ಸೈನಿಕರು ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ನಾವು ಮೌನ ಪ್ರಾರ್ಥನೆಯನ್ನು ಆಚರಿಸಿದ್ದೇವೆ, ಆದರೆ ಈಗ ಅದು ಆಗುತ್ತಿಲ್ಲ" ಎಂದು ಚೌಧರಿ ಹೇಳಿದರು.
ಚೌಧರಿ ತಮ್ಮ ಭಾಷಣದಲ್ಲಿ, ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ವಿಕಾಸಕ್ಕೆ ನೆಹರೂ ಅವರ ಕೊಡುಗೆಯನ್ನು ಸ್ಮರಿಸಿದರು,
'ನಾಯಕನು ದಣಿವಿನ ಅರಿವಿಲ್ಲದೆ"ವಿರೋಧದ ಧ್ವನಿಯನ್ನು ಕೇಳುತ್ತಿದ್ದರು ಹಾಗೂ ಪ್ರಶ್ನೆಗಳಿಗೆ ಉತ್ತರಿಸುವಾಗ ಎಂದಿಗೂ ಅಪಹಾಸ್ಯ ಅಥವಾ ದಿಕ್ಕು ತಪ್ಪಿಸಲಿಲ್ಲ" ಎಂದು ಬೆಟ್ಟು ಮಾಡಿದರು.
''ಸಂಸತ್ತಿನ ಪಾವಿತ್ರ್ಯತೆ ಮುಂದುವರಿಯಬೇಕೆಂದು ಪ್ರತಿಪಕ್ಷಗಳು ಬಯಸುತ್ತವೆ. 75 ವರ್ಷಗಳ ಅಮೃತ ಕಾಲ ಎಲ್ಲಿಂದ ಬಂತು ಎಂದು ನನಗೆ ಅರ್ಥವಾಗುತ್ತಿಲ್ಲ'' ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ ಬೆನ್ನಲ್ಲೇ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ಹಳೆಯ ಸಂಸತ್ ಭವನದಲ್ಲಿ ನಡೆದ ಮಹತ್ವದ ಐತಿಹಾಸಿಕ ಘಟನೆಗಳ ಕುರಿತು ಮಾತನಾಡಿದರು.