ಸೋನಿಯಾ ಗಾಂಧಿ ಪುಸ್ತಕ ಓದಿದ್ದರೂ ಒಪ್ಪಿಕೊಳ್ಳಲು ಕೆಲವರಿಗೆ ಧೈರ್ಯವಿಲ್ಲ; ಹಾರ್ಪರ್ ಕಾಲಿನ್ಸ್ ಸಿಇಒ

ಸೋನಿಯಾ ಗಾಂಧಿ (PTI), ಅನಂತ್ ಪದ್ಮನಾಭನ್ (X)
ಹೊಸದಿಲ್ಲಿ: “ಭಾರತದಲ್ಲಿ ಈಗ ಕೇವಲ ಮೂರು ರೀತಿಯ ಜನರಿದ್ದಾರೆ. ಸೋನಿಯಾ ಗಾಂಧಿಯವರ ‘Belonging: A Journey of Love’ ಪುಸ್ತಕವನ್ನು ಖರೀದಿಸಿ ಓದಿದವರು, ಖರೀದಿಸಿದ ಪುಸ್ತಕ ಕೈ ಸೇರಲು ಕಾಯುತ್ತಿರುವವರು ಹಾಗೂ ಪುಸ್ತಕ ಓದಿದ್ದರೂ ಅದನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲದವರು” ಎಂದು ಹಾರ್ಪರ್ ಕಾಲಿನ್ಸ್ ಇಂಡಿಯಾದ ಸಿಇಒ ಅನಂತ್ ಪದ್ಮನಾಭನ್ ಹೇಳಿದ್ದಾರೆ.
ಸೋನಿಯಾ ಗಾಂಧಿಯವರ ಆತ್ಮಕಥನದ ಅಧಿಕೃತ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾತುಗಳನ್ನು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ನಗೆ ಮತ್ತು ಚಪ್ಪಾಳೆ ಮೊಳಗಿತು. ಮೊದಲ ಸಾಲಿನಲ್ಲಿ ಕುಳಿತಿದ್ದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಈ ಮಾತಿಗೆ ನಗೆ ಬೀರಿದರು.
ಕಾಂಗ್ರೆಸ್ ನಾಯಕಿಯ ಆತ್ಮಕಥನ ಬಿಡುಗಡೆಯಾದ ಒಂದು ವಾರದೊಳಗೆ ಎರಡು ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿದ್ದು, ಪುಸ್ತಕ ಪ್ರಕಾಶನ ಕ್ಷೇತ್ರದ ದಾಖಲೆಗಳನ್ನು ಮುರಿದಿದೆ. ಆಗಸ್ಟ್ನಲ್ಲಿ ಪ್ರಕಟಣೆಯ ಘೋಷಣೆಯಾದಾಗಿನಿಂದಲೂ ಈ ಪುಸ್ತಕ ಸುದ್ದಿಯಲ್ಲಿದೆ ಎಂದು ಪದ್ಮನಾಭನ್ ಹೇಳಿದ್ದಾರೆ.
ಸೋಮವಾರ ಹೊಸದಿಲ್ಲಿಯ ಐಟಿಸಿ ಮೌರ್ಯ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ನಾಯಕರು, ಇಂಡಿಯಾ ಮೈತ್ರಿಕೂಟದ ಪ್ರತಿನಿಧಿಗಳು, ಸಾಹಿತಿಗಳು ಹಾಗೂ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮಿಳುನಾಡಿನ ಸಿಎಂ ಸಿ. ಜೋಸೆಫ್ ವಿಜಯ್, ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು ಉಪಸ್ಥಿತರಿದ್ದರು.
ಕಳೆದ ಮಂಗಳವಾರ ಬೆಳಗ್ಗೆ 10 ಗಂಟೆಗೆ ಮಾರಾಟ ಆರಂಭವಾದ ಬಳಿಕ ಪುಸ್ತಕದ ಎರಡು ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ದೇಶದ ಅತ್ಯಂತ ವೇಗವಾಗಿ ಮಾರಾಟವಾದ ಪುಸ್ತಕ, ಚೊಚ್ಚಲ ಕೃತಿ, ಕಾಲ್ಪನಿಕವಲ್ಲದ ಕೃತಿ ಮತ್ತು ಆತ್ಮಕಥನ ಎಂಬ ದಾಖಲೆಗಳನ್ನು ಇದು ನಿರ್ಮಿಸಿದೆ ಎಂದು ಅವರು ಹೇಳಿದರು.
ಪುಸ್ತಕ ಬಿಡುಗಡೆಯಾದ ದಿನ ಕೇವಲ 10 ನಿಮಿಷಗಳಲ್ಲಿ 15 ಸಾವಿರಕ್ಕೂ ಅಧಿಕ ಪ್ರತಿಗಳನ್ನು ಓದುಗರಿಗೆ ತಲುಪಿಸಲಾಗಿದೆ. ಇದು ಭಾರತದ ಪ್ರಕಾಶನ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಪುಸ್ತಕ ವಿತರಿಸಿದ ದಾಖಲೆಯಾಗಿದೆ ಎಂದು ಅವರು ತಿಳಿಸಿದರು.
ಈ ಪುಸ್ತಕವನ್ನು ಭಾರತದಲ್ಲಿ ಪೆಂಗ್ವಿನ್ ರ್ಯಾಂಡಮ್ ಹೌಸ್ ಪ್ರಕಟಿಸಬೇಕಿತ್ತು. ಆದರೆ ಸಂಪಾದಕೀಯ ಬದಲಾವಣೆಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಕಾಶನ ಸಂಸ್ಥೆಯ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬಳಿಕ ಹಾರ್ಪರ್ ಕಾಲಿನ್ಸ್ ಇಂಡಿಯಾಗೆ ಪ್ರಕಟಣೆಯ ಜವಾಬ್ದಾರಿ ವಹಿಸಲಾಯಿತು.






