ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿ ಅರ್ಜಿ; ಪ್ರತಿಕ್ರಿಯೆ ನೀಡುವಂತೆ ಕೇಂದ್ರ, ಲಡಾಖ್ಗೆ ಸುಪ್ರೀಂ ಸೂಚನೆ

ಸೋನಮ್ ವಾಂಗ್ಚುಕ್ | Photo Credit : PTI
ಹೊಸದಿಲ್ಲಿ, ಅ. 29: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಅಂಗ್ಮೊ ಸಲ್ಲಿಸಿದ ತಿದ್ದುಪಡಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರ ಹಾಗೂ ಲಡಾಖ್ ನ ಪ್ರತಿಕ್ರಿಯೆ ಕೋರಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ ತಿದ್ದುಪಡಿ ಅರ್ಜಿಯ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ.
ಸೆಪ್ಟಂಬರ್ ತಿಂಗಳಾಂತ್ಯದಲ್ಲಿ ಲಡಾಖ್ ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿತರಾದ ಸೋನಮ್ ವಾಂಗ್ಚುಕ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಅವರ ಪತ್ನಿ ಗೀತಾಂಜಲಿ ಅಂಗ್ಮೊ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ತನ್ನ ಪತಿ ಸೋನಮ್ ವಾಂಗ್ಚುಕ್ ಅವರನ್ನು ಬಂಧಿಸಲು ಲಡಾಖ್ ನೀಡಿದ ಕಾರಣಗಳನ್ನು ಪ್ರಶ್ನಿಸಲು ಅವರು ಬಯಸಿದ್ದರು. ಆದುದರಿಂದ ಆಂಗ್ಮೊ ಅವರ ಅರ್ಜಿ ಪರಿಷ್ಕರಿಸಲು ಸುಪ್ರೀಂ ಕೋರ್ಟ್ ಅಕ್ಟೋಬರ್ 16ರಂದು ಅನುಮತಿ ನೀಡಿತ್ತು.
ಆಂಗ್ಮೊ ಸುಪ್ರೀಂ ಕೋರ್ಟ್ನ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ ತನ್ನ ಪತಿಯ ಬಂಧನ ಕಾನೂನು ಬಾಹಿರ ಎಂದು ಪ್ರತಿಪಾದಿಸಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಪರಿಸರ ಉದ್ದೇಶಗಳನ್ನು ಬೆಂಬಲಿಸಿದ್ದಕ್ಕಾಗಿ ಗೌರವಾನ್ವಿತ ಪರಿಸರವಾದಿ ಮತ್ತು ಸಾಮಾಜಿಕ ಸುಧಾರಕರನ್ನು ಮೌನಗೊಳಿಸುವ ಉದ್ದೇಶವನ್ನು ಈ ಬಂಧನ ಹೊಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.







