ಬಂಧನದಲ್ಲಿರುವ ವಾಂಗ್ ಚುಕ್ ರ ಲಡಾಕ್ ಶಿಕ್ಷಣ ಸಂಸ್ಥೆಯ ಸಾಧನೆಗೆ ಸಂಸದೀಯ ಸಮಿತಿ ಪ್ರಶಂಸೆ

ಸೋನಂ ವಾಂಗ್ಚುಕ್ | Photo Credit : PTI
ಹೊಸದಿಲ್ಲಿ,ಡಿ.14: ಈಗ ಕಠೋರವಾದ NSA ಕಾಯ್ದೆಯಡಿ ಬಂಧನದಲ್ಲಿರುವ, ಲಡಾಕ್ ನ ಶಿಕ್ಷಣತಜ್ಞ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೆಟೀವ್ಸ್ (ಎಚ್ಐಎಎಲ್) ಸಂಸ್ಥೆಯ ಅಸಾಧಾರಣ ಸಾಧನೆಗಾಗಿ, ಅದರಲ್ಲೂ 2020ನೇ ಸಾಲಿನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಮಾಡುತ್ತಿರುವ ಕೆಲಸಕ್ಕಾಗಿ ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಮಾನ್ಯತೆಗೆ ಅರ್ಹವಾಗಿದೆ ಎಂದು ಸಂಸದೀಯ ಸಮಿತಿ ಪ್ರಶಂಸಿಸಿದೆ.
ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ನೇತೃತ್ವದ ಸಮಿತಿಯು ಈ ವಾರದ ಆರಂಭದಲ್ಲಿ ಸಂಸತ್ ನಲ್ಲಿ ಎಚ್ಐಎಎಲ್ನ ಸಾಧನೆಯನ್ನು ಪ್ರಶಂಸಿಸಿದೆ. ಅಲ್ಲದೆ ಈ ಶಿಕ್ಷಣ ಸಂಸ್ಥೆಗೆ ಯುಜಿಸಿ ಇನ್ನೂ ಮಾನ್ಯತೆಯನ್ನು ನೀಡದೆ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಕೇಂದ್ರಾಡಳಿತವಾದ ಲಡಾಕ್ ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಹಾಗೂ ಅದನ್ನು ಸಂವಿಧಾನದ ಆರನೇ ಶೆಡ್ಯೂಲ್ ಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದು ನಾಲ್ವರು ಮೃತಪಟ್ಟಿದ್ದರು ಹಾಗೂ 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಬಳಿಕ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಾಂಗ್ಚುಕ್ ಅವರನ್ನು ಕಠೋರವಾದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿತ್ತು. ವಾಂಗ್ಚುಕ್ ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರೆಂದು ಕೇಂದ್ರ ಸರಕಾರ ಆಪಾದಿಸಿತ್ತು.
ಸಮಿತಿಯು ಲಡಾಕ್ ಗೆ ಭೇಟಿ ನೀಡಿದ ಸಂದರ್ಭ, ಎಚ್ಐಎಲ್ನ ಶೈಕ್ಷಣಿಕ, ಸಂಶೋಧನೆ ಹಾಗೂ ಉದ್ಯಮಶೀಲ ಪರಿಸರವ್ಯವಸ್ಥೆಯನ್ನು ಮೆಚ್ಚಿಕೊಂಡಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಪಾರಿಸಾರಿಕ ನೆಲೆಯಲ್ಲಿ ಪ್ರಾಯೋಗಿಕ ಶಿಕ್ಷಣ ಹಾಗೂ ಕಲಿಕೆಯಲ್ಲಿ ಅದರ ಯಶಸ್ಸು ಶ್ಲಾಘನೀಯವಾಗಿದೆ ಎಂದು ಶಿಕ್ಷಣ, ಮಹಿಳೆಯರು, ಯುವ ಹಾಗೂ ಕ್ರೀಡೆ ಕುರಿತ ಸ್ಥಾಯಿ ಸಮಿತಿ ವರದಿ ತಿಳಿಸಿದೆ.
ಸ್ಥಳೀಯ ಸಮುದಾಯದ ಮೇಲೆ ಎಚ್ಐಎಎಲ್ ಅಗಾಧವಾದ ಪರಿಣಾಮವನ್ನು ಬೀರಿದೆ ಹಾಗೂ ಸಾಮುದಾಯಿಕ ಚಟುವಟಿಕೆಗಳ ಮೂಲಕ ಅಂತರ್ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ ಎಂದು ಸಮಿತಿ ತಿಳಿಸಿದೆ.
ಎಚ್ಐಎಲ್ ನ ಮಾದರಿಯನ್ನು ಶಿಕ್ಷಣ ಸಚಿವಾಲಯವು ನಿಕಟವಾಗಿ ಅಧ್ಯಯನ ನಡೆಸಬೇಕು ಹಾಗೂ ಅದು ಇತರ ಸ್ಥಳಗಳಲ್ಲೂ ಜಾರಿಗೊಳಿಸುವುದು ಸೇರಿದಂತೆ ಕೆಲವು ಶಿಫಾರಸುಗಳನ್ನು ಸಮಿತಿಯು ಸರಕಾರದ ಮುಂದಿರಿಸಿದೆ.







