ಸೋನಮ್ ವಾಂಗ್ಚುಕ್ ಆರೋಗ್ಯ ಕ್ಷೀಣ | ಮಾನವೀಯತೆ ತೋರಿಸಿ: ಉಮರ್ ಅಬ್ದುಲ್ಲಾ

ಸೋನಮ್ ವಾಂಗ್ಚುಕ್ , ಉಮರ್ ಅಬ್ದುಲ್ಲಾ | Photo Credit : PTI
ಶ್ರೀನಗರ, ಜು. 16: ಜಂತರ್ ಮಂತರ್ನಲ್ಲಿ ಉಪವಾಸ ಮುಷ್ಕರ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರವೇ ಮನವಿ ಮಾಡಬೇಕಿತ್ತು. ರಾಜಕೀಯದಲ್ಲೂ ಮಾನವೀಯತೆ ಹಾಗೂ ಸಹಾನುಭೂತಿಗೆ ಅವಕಾಶವಿರಬೇಕು ಎಂದು ಅವರು ಹೇಳಿದ್ದಾರೆ.
ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮರ್ ಅಬ್ದುಲ್ಲಾ, ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಮತ್ತು ಪರೀಕ್ಷೆಯನ್ನು ರದ್ದುಗೊಳಿಸಿರುವುದರಿಂದ ಮಕ್ಕಳಿಗೆ ಸಾಕಷ್ಟು ತೊಂದರೆ ಹಾಗೂ ಆತಂಕ ಉಂಟಾಗಿದೆ. ಆದ್ದರಿಂದ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂಬುದು ಸೋನಮ್ ವಾಂಗ್ಚುಕ್ ಅವರ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
ಆಶ್ಚರ್ಯದ ಸಂಗತಿಯೆಂದರೆ ಅವರ ಉಪವಾಸ ಮುಷ್ಕರ 19ನೇ ದಿನಕ್ಕೆ ಕಾಲಿರಿಸಿದೆ. ಅವರು ಸುಮಾರು 9 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಸರ್ಕಾರ ಉಪವಾಸ ಮುಷ್ಕರ ನಿಲ್ಲಿಸುವಂತೆ ಮನವಿ ಮಾಡುತ್ತಿಲ್ಲ. ರಾಜಕೀಯಕ್ಕೆ ಅದರದ್ದೇ ಆದ ಸ್ಥಾನವಿದೆ. ರಾಜಕೀಯದಲ್ಲೂ ಮಾನವೀಯತೆ ಮತ್ತು ಸಹಾನುಭೂತಿಗೆ ಜಾಗವಿರಬೇಕು ಎಂದು ಅಬ್ದುಲ್ಲಾ ಹೇಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ ರೀತಿಯನ್ನು ಹೋಲಿಸಿದ ಅಬ್ದುಲ್ಲಾ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರತಿಭಟನಕಾರರೊಂದಿಗೆ ಮಾತನಾಡಲು ಮತ್ತು ಅವರ ಉಪವಾಸವನ್ನು ಕೊನೆಗೊಳಿಸಿ ಮಾತುಕತೆಗೆ ಮರಳುವಂತೆ ಮನವೊಲಿಸಲು ಸಚಿವರನ್ನು ಕಳುಹಿಸಿದ್ದರು ಎಂದು ನೆನಪಿಸಿಕೊಂಡರು.
ಆದರೆ, ವಾಂಗ್ಚುಕ್ ಅವರೊಂದಿಗೆ ಮಾತನಾಡಲು ಇದುವರೆಗೆ ಯಾವುದೇ ಪ್ರಯತ್ನ ನಡೆದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಧೋರಣೆ ಏನು ಎಂಬುದು ನಮಗೆ ತಿಳಿದಿಲ್ಲ. ಆದರೆ, ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ನಮಗೆ ಖಂಡಿತವಾಗಿಯೂ ಆತಂಕ ಇದೆ ಎಂದು ಅವರು ಹೇಳಿದರು.
ಹಲವಾರು ರಾಜಕಾರಣಿಗಳು ಅಲ್ಲಿಗೆ ಹೋಗಿದ್ದಾರೆ. ಅವರು ನೀಟ್ ಪರೀಕ್ಷೆಗೆ ಸಂಬಂಧಿಸಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವುದು ತಪ್ಪಲ್ಲ. ಸರಿಯಾಗಿದೆ ಎಂದು ನಮಗೂ ಅನಿಸುತ್ತಿದೆ. ಆದರೆ, ಈ ಸರ್ಕಾರ ಇಂತಹ ವಿಷಯಗಳ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಉಮರ್ ಅಬ್ದುಲ್ಲಾ ಹೇಳಿದರು.






