ಪ್ರತಿಭಟನೆಗೆ ನಡೆಸದಂತೆ ಗೃಹಬಂಧನ: ಪೊಲೀಸರ ವಿರುದ್ಧ ಸೋನಮ್ ವಾಂಗ್ಚುಕ್ ಆರೋಪ

ಸೋನಮ್ ವಾಂಗ್ಚುಕ್ (Photo: TOI)
ಲಡಾಖ್: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಅವರು ಗುರುವಾರ ಆರೋಪಿಸಿದ್ದಾರೆ.
ತಮ್ಮನ್ನು ಗೃಹಬಂಧನದಲ್ಲಿರಿಸಲು ಪೊಲೀಸರು ಯಾವುದೇ ಕಾರಣ ನೀಡಿಲ್ಲ ಎಂದು ವಾಂಗ್ಚುಕ್ ಹೇಳಿದ್ದಾರೆ.
ಸೆಪ್ಟೆಂಬರ್ 2025ರಲ್ಲಿ ಲೇಹ್ನಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಸಾವುಗಳ ಕುರಿತು ನ್ಯಾಯಾಂಗ ತನಿಖಾ ಆಯೋಗ ಸಲ್ಲಿಸಬೇಕಿದ್ದ ವರದಿ ವಿಳಂಬವಾಗುತ್ತಿರುವುದೇಕೆ? ಚಳಿಗಾಲದ ನಡುವೆಯೇ ತರಾತುರಿಯಲ್ಲಿ ಸ್ಥಳೀಯ ಮಂಡಳಿ ಚುನಾವಣೆಗಳನ್ನು ಜನರ ಮೇಲೆ ಹೇರಲಾಗುತ್ತಿರುವುದೇಕೆ? ಎಂಬ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ತಮ್ಮ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆದರೆ, ಲಡಾಖ್ನಲ್ಲಿ ಮುಂಬರುವ ಸ್ಥಳೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮತ್ತು ಲೇಹ್ ಜಿಲ್ಲಾಧಿಕಾರಿ ಹೊರಡಿಸಿರುವ ನಿಷೇಧಾಜ್ಞೆಗಳ ಪ್ರಕಾರ, ವಾಂಗ್ಚುಕ್ ಅವರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಡಾಖ್ನಲ್ಲಿ ನವೆಂಬರ್ 21ರಂದು ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಚುನಾವಣೆಗಳು ನಡೆಯಲಿವೆ. ಡಿಸೆಂಬರ್ 4ರಂದು ಲಡಾಖ್ನ ಎಂಟು ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಗಳಿಗೆ ಚುನಾವಣೆ ನಡೆಯಲಿದೆ.
ಈ ನಡುವೆ, ತಮ್ಮ ವಿರುದ್ಧ ಬುಧವಾರ ಹೊರಡಿಸಲಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಆದೇಶದ ಕುರಿತು ಸ್ಪಷ್ಟನೆ ನೀಡುವಂತೆ ವಾಂಗ್ಚುಕ್ ಗುರುವಾರ ಪೊಲೀಸ್ ಮತ್ತು ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ತಮ್ಮ ಮೂಲಭೂತ ಹಕ್ಕು. ಹೀಗಾಗಿ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ವಾಂಗ್ಚುಕ್ ಹೇಳಿದ್ದಾರೆ.






