ದಿಲ್ಲಿಯಲ್ಲಿ ಕಾಕ್ರೋಚ್ ಜನತಾಪಾರ್ಟಿಯ ಪ್ರತಿಭಟನೆಯಲ್ಲಿ ಭಾಗವಹಿಸಲಿರುವ ಸೋನಮ್ ವಾಂಗ್ಚುಕ್

Photo | PTI
ಶ್ರೀನಗರ: ಭಾರತದ ಶಿಕ್ಷಣ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ಲಡಾಖ್ನ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಜೂನ್ 6 ರಂದು ದಿಲ್ಲಿಯಲ್ಲಿ ನಡೆಯಲಿರುವ ಕಾಕ್ರೋಚ್ ಜನತಾಪಾರ್ಟಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.
ಎಕ್ಸ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಆನ್ಲೈನ್ ಚಳುವಳಿಯ ಸ್ವರೂಪ ಮತ್ತು ಉದ್ದೇಶದ ಬಗ್ಗೆ ಸ್ಪಷ್ಟತೆ ಪಡೆಯಲು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ. “ಕಾಕ್ರೋಚ್ ಜನತಾ ಪಕ್ಷವು ಭಾರತೀಯ ಯುವಕರ ಅಭಿವ್ಯಕ್ತಿಯಾಗಿದೆ ಮತ್ತು ವಿದೇಶಿ ಶಕ್ತಿಗಳ ಪಿತೂರಿಯಲ್ಲ ಎಂದು ನನಗೆ ಮನವರಿಕೆ ಮಾಡಲು ನಾನು ನನ್ನ ಹಿಂದಿನ ಪೋಸ್ಟ್ನಲ್ಲಿ ಕಾಕ್ರೋಚ್ ಗಳಿಗೆ ಕೇಳಿದ್ದೆ. ನಂತರ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ನನ್ನನ್ನು ಸಂಪರ್ಕಿಸಿದರು, ನಾನು ಅವರೊಂದಿಗೆ ಮಾತನಾಡಿದಾಗ, ಅವರು ಯಾವುದೇ ದುರುದ್ದೇಶ ಹೊಂದಿಲ್ಲ, ಅವರು ದೇಶವನ್ನು ಸುಧಾರಿಸಲು ತ್ಯಾಗ ಮಾಡುತ್ತಿದ್ದಾರೆ ಎಂಬುದು ಮನವರಿಕೆಯಾಯಿತು" ಎಂದು ವಾಂಗ್ಚುಕ್ ಹೇಳಿದರು.
ದಿಲ್ಲಿಯಲ್ಲಿ ಯೋಜಿತ ಜನಾಂದೋಲನವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುವ ಗುರಿಯನ್ನು ಹೊಂದಿದೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಗಳ ಹಿನ್ನೆಲೆಯಲ್ಲಿ ಈ ಬೇಡಿಕೆಯನ್ನು ಮುಂದಿರಿಸಲಾಗಿದೆ. ಈ ತಿಂಗಳ 6ರಂದು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುವ ಸಲುವಾಗಿ ಜನರು ದಿಲ್ಲಿಗೆ ಬರಬೇಕೆಂದು ಅವರು ಕರೆ ನೀಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ನಾನು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಾಗಿ ಶ್ರಮಿಸುತ್ತಾ, ಹೋರಾಡುತ್ತಾ ಬಂದಿದ್ದೇನೆ. ಹಲವು ಪ್ರಯತ್ನಗಳ ಹೊರತಾಗಿಯೂ ಅರ್ಥಪೂರ್ಣ ಬದಲಾವಣೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಸೋನಮ್ ವಾಂಗ್ಚುಕ್ ವಿಷಾದ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿನ ಆಡಳಿತ ವ್ಯವಸ್ಥೆ ಕುರಿತು ಟೀಕಿಸಿದ ವಾಂಗ್ಚುಕ್, ಕಳೆದ ಮೂರು ಅಥವಾ ನಾಲ್ಕು ಶಿಕ್ಷಣ ಸಚಿವರ ಕಾರ್ಯವೈಖರಿಯನ್ನು ನೋಡಿದಾಗ, ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂಬ ಭರವಸೆ ನನಗೆ ಮೂಡುವುದಿಲ್ಲ ಎಂದು ಹೇಳಿದರು.
ಪರೀಕ್ಷಾ ಅಕ್ರಮಗಳಂತಹ ಸಮಸ್ಯೆಗಳನ್ನು ಉಲ್ಲೇಖಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ ಅತ್ಯಗತ್ಯ ಎಂದು ವಾದಿಸಿದರು.
“ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆದರೆ ಸ್ವಾಭಿಮಾನಿ ಶಿಕ್ಷಣ ಸಚಿವರು ರಾಜೀನಾಮೆ ನೀಡುತ್ತಾರೆ. ಶಿಕ್ಷಣ ಸಚಿವರ ರಾಜೀನಾಮೆಯ ಬೇಡಿಕೆ ಜೂನ್ 5ರೊಳಗೆ ಈಡೇರದಿದ್ದರೆ ನಾನು ಕೂಡ ದಿಲ್ಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಈಗ ಅಲ್ಲದಿದ್ದರೆ ಯಾವಾಗ? ನಾವು ಅಲ್ಲದಿದ್ದರೆ ಯಾರು?"ಎಂದು ಸೋನಮ್ ವಾಂಗ್ಚುಕ್ ಪ್ರಶ್ನಿಸಿದರು.
ಡಿಜಿಟಲ್ ಅಭಿಯಾನವಾಗಿ ಆರಂಭವಾದ ಸಿಜೆಪಿ (CJP) ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಆನ್ಲೈನ್ನಲ್ಲಿ ವೇಗವಾಗಿ ಜನರನ್ನು ಸಂಘಟಿಸುವ ಮೂಲಕ ಗಮನ ಸೆಳೆದಿದೆ. ಈ ಚಳವಳಿಗೆ ವಾಂಗ್ಚುಕ್ ಅವರು ಬೆಂಬಲ ವ್ಯಕ್ತಪಡಿಸಿರುವುದರಿಂದ ಜೂನ್ 6ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿರುವ ಪ್ರತಿಭಟನೆ ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.






