ಆಸ್ಪತ್ರೆಯ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ; ವೈದ್ಯಕೀಯ ಹಸ್ತಕ್ಷೇಪದ ನೆಪದಲ್ಲಿ ಅಕ್ರಮ ಬಂಧನ: ವಾಂಗ್ಚುಕ್ ಪತ್ನಿ ಆಂಗ್ಮೋ
ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕೋರಿ ಪತ್ನಿಯಿಂದ ಹೈಕೋರ್ಟ್ ಗೆ ಅರ್ಜಿ

Photo | ANI
ಹೊಸದಿಲ್ಲಿ: ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಕೋರಿ ಅವರ ಪತ್ನಿ ಗೀತಾಂಜಲಿ ಆಂಗ್ಮೋ ದಿಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸರಕಾರಿ ಆಸ್ಪತ್ರೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವುದಾಗಿ ತಿಳಿಸಿರುವ ಅವರು, ಅರ್ಜಿಯ ತುರ್ತು ವಿಚಾರಣೆಯನ್ನು ನಡೆಸುವಂತೆಯೂ ಕೋರಿದ್ದಾರೆ.
ಜಂತರ್ ಮಂತರ್ ನಲ್ಲಿ ಶಾಂತಿಯುತ ಉಪವಾಸ ಸತ್ಯಾಗ್ರಹದ 21ನೇ ದಿನದಲ್ಲಿದ್ದ ವಾಂಗ್ಚುಕ್ ಅವರನ್ನು ‘ವೈದ್ಯಕೀಯ ಹಸ್ತಕ್ಷೇಪದ ನೆಪದಲ್ಲಿ ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ಬಂಧಿಸಲಾಗಿದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಅವರನ್ನು ಇರಿಸಿರುವುದನ್ನು ಕಾನೂನುಬಾಹಿರ ಹಾಗೂ ಅಸಂವಿಧಾನಿಕ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ, ಇದು ಸಂವಿಧಾನದ 19 ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸಿ, ವಾಂಗ್ಚುಕ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಅಥವಾ ಬಿಡುಗಡೆಗೆ ಆದೇಶ ನೀಡುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ಕಳೆದ 20 ದಿನಗಳಿಂದ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ಅವರ ವಕೀಲರನ್ನು ಭೇಟಿಯಾಗಲು ಅವಕಾಶ ನೀಡದೆ. ವಾಂಗ್ಚುಕ್ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇದೇ ವೇಳೆ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಪೋಸ್ಟ್ನಲ್ಲಿ ಆಂಗ್ಮೋ, ಸಫ್ದರ್ಜಂಗ್ ಆಸ್ಪತ್ರೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ವಾಂಗ್ಚುಕ್ ಅವರ ಪೊಟ್ಯಾಸಿಯಂ ಮಟ್ಟಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ನೀಡಿದ ಮಾಹಿತಿ ಮತ್ತು ಸಾರ್ವಜನಿಕ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟಿಸಿದ ವಿವರಗಳ ನಡುವೆ ವ್ಯತ್ಯಾಸವಿದೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು, ವಾಂಗ್ಚುಕ್ ಅವರ ಪೊಟ್ಯಾಸಿಯಂ ಮಟ್ಟ 2.9ಕ್ಕೆ ಇಳಿದಿದ್ದು, ಅದು ಜೀವಕ್ಕೆ ಅಪಾಯಕಾರಿ ಸ್ಥಿತಿ ಎಂದು ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಆಸ್ಪತ್ರೆ ಬಿಡುಗಡೆ ಮಾಡಿದ ಸಾರ್ವಜನಿಕ ಹೆಲ್ತ್ ಬುಲೆಟಿನ್ನಲ್ಲಿ ನಿಖರ ಅಂಕಿ-ಅಂಶವನ್ನು ಪ್ರಕಟಿಸದೆ, ‘ಪೊಟ್ಯಾಸಿಯಂ ಮಟ್ಟ ಕಡಿಮೆಯಾಗಿದೆ’ ಎಂದು ಮಾತ್ರ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ಇದರಿಂದ ಅನುಮಾನಗೊಂಡ ಕುಟುಂಬವು ಹಲವು ಬಾರಿ ಮನವಿ ಮಾಡಿತು. ಸುಮಾರು 10 ಗಂಟೆಗಳ ಬಳಿಕ, ರಾತ್ರಿ 10.30ರ ಸುಮಾರಿಗೆ ವಾಂಗ್ಚುಕ್ ಅವರ ರಕ್ತದ ಮಾದರಿಯನ್ನು ಬೇರೆ ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಅವಕಾಶ ನೀಡಲಾಯಿತು. ಆ ಪರೀಕ್ಷೆಯಲ್ಲಿ ಪೊಟ್ಯಾಸಿಯಂ ಮಟ್ಟ 3.5 ಎಂದು ವರದಿಯಾಗಿದ್ದು, ಅದು ಸಾಮಾನ್ಯ ಮಿತಿಯಲ್ಲಿದೆ ಎಂದು ಆಂಗ್ಮೋ ತಿಳಿಸಿದ್ದಾರೆ.
ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ಮೌಲ್ಯಮಾಪನ ಮತ್ತು ಸ್ವತಂತ್ರ ಪ್ರಯೋಗಾಲಯದ ಪರೀಕ್ಷಾ ವರದಿಯಲ್ಲಿ ಕಂಡುಬಂದ ವ್ಯತ್ಯಾಸದಿಂದ ಸರಕಾರಿ ಆಸ್ಪತ್ರೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವುದಾಗಿ ಆಂಗ್ಮೋ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವಾಂಗ್ಚುಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಬೇಕು ಹಾಗೂ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ದಿಲ್ಲಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.






