ಬ್ಲೂ ಸ್ಟಾರ್ ಬಗ್ಗೆ ಇಂದಿರಾ ಕಣ್ಣೀರು ನೆನಪಿಸಿಕೊಂಡ ಸೋನಿಯಾ ಗಾಂಧಿ: ಅಕಾಲಿ ದಳ ತೀಕ್ಷ್ಣ ಪ್ರತಿಕ್ರಿಯೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ Photo : AICC
ಚಂಡೀಗಢ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು, ಸ್ವರ್ಣ ಮಂದಿರದ ಆವರಣದಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆ 'ಆಪರೇಷನ್ ಬ್ಲೂ ಸ್ಟಾರ್' ದೃಶ್ಯಗಳನ್ನು ಕಂಡು ತೀವ್ರವಾಗಿ ದುಃಖಿತರಾಗಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ, ಪಂಜಾಬ್ನಲ್ಲಿ ಹೊಸ ರಾಜಕೀಯ ವಿವಾದ ಭುಗಿಲೆದ್ದಿದೆ.
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಿರೋಮಣಿ ಅಕಾಲಿದಳದ ವಕ್ತಾರ ಅರ್ಷದೀಪ್ ಸಿಂಗ್ ಕ್ಲೇರ್, ಈ ಕಾರ್ಯಾಚರಣೆಯು ಸಿಖ್ ಸಮುದಾಯ ಹಾಗೂ ಸಿಖ್ಖರ ಸರ್ವೋಚ್ಚ ಧಾರ್ಮಿಕ ಪೀಠವಾದ 'ಅಕಾಲ್ ತಖ್ ಸಾಹಿಬ್' ಮೇಲಿನ ನೇರ ದಾಳಿಯಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಆಪರೇಷನ್ ಬ್ಲೂ ಸ್ಟಾರ್' ವ್ಯವಸ್ಥಿತ ಪಿತೂರಿಯ ಭಾಗವಾಗಿ ನಡೆಸಲಾಯಿತು ಎಂದು ಆರೋಪಿಸಿದ ಅವರು, ಈ ಘಟನೆಯ ನೋವು ತಲೆಮಾರುಗಳವರೆಗೆ ಸಿಖ್ಖರ ಹೃದಯದಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.
1984ರ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಉಂಟುಮಾಡಿದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸಿಖ್ಖರ ವಿರುದ್ಧ ನರಮೇಧ ನಡೆಸಿತು. ಮುಗ್ಧ ಸಿಖ್ಖರನ್ನು ಕೊಲ್ಲಲಾಯಿತು. ಪಕ್ಷದ ನಾಯಕತ್ವವು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಮಾತನಾಡಬೇಕು. ಅವರ ಮನೆಗಳು ಸುಟ್ಟುಹೋಗಿರುವುದನ್ನು ನೋಡಿದ ಕುಟುಂಬಗಳ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಂದಿರಾ ಗಾಂಧಿ ಕಣ್ಣೀರು ಹಾಕಿದ್ದರು:
ಪುಸ್ತಕ ಬಿಡುಗಡೆಗೂ ಮುನ್ನ 'ದಿ ಗಾರ್ಡಿಯನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸೋನಿಯಾ ಗಾಂಧಿ ಅವರು, 'ಆಪರೇಷನ್ ಬ್ಲೂ ಸ್ಟಾರ್' ಸಮಯದಲ್ಲಿ ನಡೆದ ವಿನಾಶದ ಚಿತ್ರಗಳನ್ನು ತಮ್ಮ ಅತ್ತೆಗೆ ತೋರಿಸಿದಾಗ, ಅವರ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು ಎಂದು ಹೇಳಿದ್ದಾರೆ.
ಅವರಿಗೆ ಜೀವ ಬೆದರಿಕೆಗಳು ಬಂದವು. ತಮ್ಮ ಸಾವಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅವರು, ಒಂದು ವೇಳೆ ಮೃತಪಟ್ಟರೆ ಏನು ಮಾಡಬೇಕೆಂದು ನಮಗೆ ಹೇಳಿದ್ದರು. ರಾಹುಲ್ ಧೈರ್ಯಶಾಲಿಯಾಗಿರಬೇಕು ಮತ್ತು ಅಳಬಾರದು ಎಂದಿದ್ದರು ಎಂದು ಸಂದರ್ಶನದಲ್ಲಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಮಂಗಳವಾರ ಬಿಡುಗಡೆಯಾಗಲಿದೆ.






