ವಿಶೇಷ ಅಧಿವೇಶನದ ಅಜೆಂಡಾ ಬಹಿರಂಗಪಡಿಸಿ: ಪ್ರಧಾನಿ ಮೋದಿಗೆ ಸೋನಿಯಾಗಾಂಧಿ ಪತ್ರ

ಸೋನಿಯಾಗಾಂಧಿ | Photo: PTI
ಹೊಸದಿಲ್ಲಿ: ಮುಂಬರುವ ಸಂಸತ್ನ ವಿಶೇಷ ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಸ್ಪಷ್ಟತೆಯನ್ನು ಕೋರಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ. ಅಚ್ಚರಿಯ ನಡೆಯೊಂದರಲ್ಲಿ ಕೇಂದ್ರ ಸರಕಾರವು ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ನ ವಿಶೇಷ ಅಧಿವೇಶನವು ನಡೆಯಲಿದೆಯೆಂದು ಘೋಷಿಸಿತ್ತು. ಆದರೆ ಅಧಿವೇಶನದ ಕಾರ್ಯಸೂಚಿಯನ್ನು ಅದು ಈವರೆಗೆ ಬಹಿರಂಗಪಡಿಸಿಲ್ಲ.
ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ಚರ್ಚಿಸಲು ಅಥವಾ ಸಮಾಲೋಚಿಸಲು ಬಯಸಿರುವ 9 ವಿಷಯಗಳನ್ನು ಸೋನಿಯಾಗಾಂಧಿ ಅವರು ಪ್ರತಿಪಕ್ಷಗಳ ಪರವಾಗಿ ಪ್ರಧಾನಿಗೆ ಬರೆದ ಪತ್ರದಲ್ಲಿ ಪಟ್ಟಿ ಮಾಡಿದ್ದಾರೆ. ಬೆಲೆಯೇರಿಕೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗದ ಹಿನ್ನೆಲೆಯಲ್ಲಿ ದೇಶದ ಹಾಲಿ ಆರ್ಥಿಕ ಪರಿಸ್ಥಿತಿ, ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿ ರೈತರಿಗೆ ನೀಡಿರುವ ಬದ್ಧತೆ, ಅದಾನಿ ಗ್ರೂಪ್ನ ವ್ಯವಹಾರಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿಯ ನೇಮಕ, ಮಣಿಪುರ ಬಿಕ್ಕಟ್ಟು, ಹರ್ಯಾಣದಲ್ಲಿ ಕೋಮುಗಲಭೆ, ಚೀನಾದಿಂದ ಭಾರತೀಯ ಭೂಪ್ರದೇಶದ ಅತಿಕ್ರಮಣ, ಜಾತಿಗಣತಿಯ ತುರ್ತು ಅವಶ್ಯಕತೆ, ಕೇಂದ್ರ-ರಾಜ್ಯ ಸಂಬಂಧಗಳಿಗೆ ಉಂಟಾದ ಹಾನಿ ಹಾಗೂ ರಾಜ್ಯಗಳಲ್ಲಿ ಪ್ರಾಕೃತಿಕ ವಿಕೋಪಗಳ ಮೇಲಿನ ಪರಿಣಾಮ ಇವು ಚರ್ಚಿಸಲಾಗುವ ವಿಷಯಳಾಗಿವೆ.
ಸೋನಿಯಾ ಅವರು ಪ್ರಧಾನಿಗೆ ಬರೆದ ಪತ್ರದ ವಿವರಗಳನ್ನು ಬಹಿರಂಗಪಡಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸದನದ ಕಲಾದಲ್ಲಿ ಕಾರ್ಯಸೂಚಿಯ ಬಗ್ಗೆ ಚರ್ಚಿಸದೆ ಅಥವಾ ಪಟ್ಟಿ ಮಾಡದೆಯೇ ದಿಢೀರ್ ಅಧಿವೇಶನವನ್ನು ಕರೆದಿರುವುದು ಇದೇ ಮೊದಲ ಬಾರಿ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಅಧಿವೇಶನವನ್ನು ಕರೆದಿರುವುದನ್ನು ನೋಡಿದರೆ ಅವರು ಭಯಭೀತರಾಗಿರುವಂತೆ ತೋರುತ್ತದೆ ಎಂದು ರಮೇಶ್ ಹೇಳಿದರು.
ಮುಂಬರುವ ಸಂಸತ್ನ ದಿಢೀರ್ ಅಧಿವೇಶನದಕ್ಕೆ ಸಂಬಂಧಿಸಿದಂತೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿನ ಇಂಡಿಯಾ ಮೈತ್ರಿಕೂಟದ ನಾಯಕರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಂಗಳವಾರ ತಡರಾತ್ರಿ ಸಭೆ ನಡೆಸಿದ್ದು, ಮುಂಬರುವ ಅಧಿವೇಶನದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಒಂದು ರಾಷ್ಟ್ರ, ಒಂದು ಚುನಾವಣೆ ಹಾಗೂ ಇಂಡಿಯಾವನ್ನು ಭಾರತ ಎಂದು ಪುನರ್ನಾಮಕರಣ ಮತ್ತಿತರ ವಿಷಯಗಳ ಕುರಿತು ದೇಶಾದ್ಯಂತ ಕಾವೇರಿದ ಚರ್ಚೆ ನಡೆಯುತ್ತಿರುವಾಗಲೇ ಸಂಸತ್ನ ವಿಶೇಷ ಅಧಿವೇಶನ ಕರೆದಿರುವುದು ಮಹತ್ವದ್ದಾಗಿದೆ.







