ಸೌಜನ್ಯ ಪ್ರಕರಣದ ಹೊಸ ತನಿಖೆ ಕುರಿತು ನಿಲುವು ತಿಳಿಸಿ: ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಸೌಜನ್ಯ
ಹೊಸದಿಲ್ಲಿ: ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ಹಲವಾರು ಸಾಕ್ಷಿಗಳು ನಿಗೂಢ ಸಂದರ್ಭಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದ ಪರವಾಗಿ ಹಾಜರಾದ ಹಿರಿಯ ವಕೀಲರಾದ ಶೋಭಾ ಗುಪ್ತಾ, ಆನಂದ್ ಸಂಜಯ್ ಎಂ ನುಲಿ ಮತ್ತು ಶೇಖರ್ ಜಿ ದೇವಾಸ ಹೇಳಿಕೊಂಡಿದ್ದರಿಂದ ಸಾಕ್ಷಿಗಳಿಗೆ ರಕ್ಷಣೆ ಒದಗಿಸುವಂತೆ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವಿಶ್ಕರ್ ಸಿಂಘ್ವಿ ಅವರಿಗೆ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ನಿರ್ದೇಶನ ನೀಡಿದೆ.
ಈ ಕುರಿತು ಸಮಯಾವಕಾಶ ನೀಡಿದ್ದರೂ ಅಗತ್ಯ ಕ್ರಮಗಳ ವಿವರಗಳನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಆರಂಭದಲ್ಲಿ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಿತ್ತು, ನಂತರ ಸಿಬಿಐಗೆ ವರ್ಗಾಯಿಸಲಾಗಿತ್ತು, ಅಂತಿಮವಾಗಿ ಸಿಬಿಐ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿತ್ತು ಎಂದು ಅವಿಶ್ಕರ್ ಸಿಂಘ್ವಿ ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಈ ಪ್ರಕರಣವನ್ನು ಮರುಪರಿಶೀಲಿಸಲು ವಿಶೇಷ ತನಿಖಾ ತಂಡ (SIT) ರಚಿಸಲು ನಿಮಗೆ ಸಾಧ್ಯವಿದೆಯೇ ಎಂಬುದನ್ನು ಸ್ಪಷ್ಟಪಡಿಸಿ ಅಫಿಡವಿಟ್ ಸಲ್ಲಿಸಬೇಕೆಂದು ನಾವು ಬಯಸುತ್ತೇವೆ. ಇತರ ಆರೋಪಿಗಳ ಪಾತ್ರವನ್ನೂ ಪರಿಶೀಲಿಸುವ ಬಗ್ಗೆ ಕೂಡ ನಿಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿ ಎಂದು ನ್ಯಾಯಪೀಠವು ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವಿಶ್ಕರ್ ಸಿಂಘ್ವಿ ಅವರಿಗೆ ತಿಳಿಸಿದೆ.
ಪ್ರಕರಣದ ಬಗ್ಗೆ ಸಿಬಿಐ ಮತ್ತೆ ತನಿಖೆ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು. 2012ರಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಸಿಬಿಐ ತನಿಖೆಗೆ 2013ರಲ್ಲಿ ಹಸ್ತಾಂತರಿಸಲಾಗಿತ್ತು ಎಂದು ಪೀಠವು ಹೇಳಿದೆ.
’ಸಂತ್ರಸ್ತೆಗೆ ಸೇರಿದ ವಸ್ತುಗಳನ್ನು ಸಂರಕ್ಷಿಸಿ ಇಡಲಾಗಿದೆ. ಡಿಎನ್ಎ ಪರೀಕ್ಷೆ ನಡೆಸಿದರೆ ಸತ್ಯಾಂಶ ಬಯಲಿಗೆ ಬರಲಿದೆ. ನಿಜವಾದ ಆರೋಪಿಗಳು ಬೇರೆ ವ್ಯಕ್ತಿಗಳು ಎಂದು ವಿಚಾರಣಾ ನ್ಯಾಯಾಲಯವೂ ಹೇಳಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
2012ರಲ್ಲಿ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಾಥಮಿಕವಾಗಿ ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
2012ರ ನವೆಂಬರ್ 6ರಂದು ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಸರಕಾರ ಆದೇಶಿಸಿತ್ತು. ಕಾರ್ಕಳದ ಸಂತೋಷ್ ರಾವ್ ಆರೋಪಿ ಎಂದು ಸಿಬಿಐ ಗುರುತಿಸಿತ್ತು. 2023ರ ಜುಲೈ 16ರಂದು ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು.
ಆ ಬಳಿಕ ಧರ್ಮಸ್ಥಳ ಪ್ರದೇಶದಲ್ಲಿ ಕಳೆದ 20 ವರ್ಷಗಳಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನೀಡಿದ ಹೇಳಿಕೆ ಹಿನ್ನೆಲೆ ರಾಜ್ಯ ಸರಕಾರ ಎಸ್ಐಟಿ ರಚಿಸಿತ್ತು.






