ಗಾಝಾದ ಪರವಾಗಿ ಮಾತನಾಡುವುದು ದೇಶಭಕ್ತಿಯಲ್ಲ, ನಮ್ಮದೇ ದೇಶದ ಸಮಸ್ಯೆಗಳತ್ತ ಗಮನ ಹರಿಸಿ: ಬಾಂಬೆ ಹೈಕೋರ್ಟ್
ಫೆಲೆಸ್ತೀನ್ ವಿಚಾರದಲ್ಲಿ ಪ್ರತಿಭಟನೆಗೆ ಅನುಮತಿ ಕೋರಿ ಸಲ್ಲಿಸಿದ್ದ ಸಿಪಿಐ(ಎಂ) ಅರ್ಜಿ ತಿರಸ್ಕೃತ

ಬಾಂಬೆ ಹೈಕೋರ್ಟ್ (Photo: PTI)
ಮುಂಬೈ: ಫೆಲೆಸ್ತೀನಿನ ಗಾಝಾದಲ್ಲಿ ಇಸ್ರೇಲ್ ನಡೆಸಿದ ನರಮೇಧ ಖಂಡಿಸಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ವು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
“ಗಾಝಾ ಪರವಾಗಿ ಮಾತನಾಡುವುದು ದೇಶಭಕ್ತಿಯಲ್ಲ. ನಮ್ಮದೇ ದೇಶದ ಸಮಸ್ಯೆಗಳತ್ತ ಗಮನ ಹರಿಸಿ ", ಎಂದು ನ್ಯಾಯಾಲಯದ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿದೆ.
ಅರ್ಜಿಯನ್ನು ವಿಚಾರಣೆಗೆ ಕೈ ಎತ್ತಿಕೊಂಡ ಬಾಂಬೆ ಹೈಕೋರ್ಟ್ ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಕದ್ ಅವರು, ಭಾರತದಲ್ಲಿಯೇ ಹಲವಾರು ಸಮಸ್ಯೆಗಳಿವೆ, ಅದರತ್ತ ಗಮನಹರಿಸಿ. ನಮ್ಮ ದೇಶದ ಮೇಲೆ ಪರಿಣಾಮ ಬೀರದ ಸಮಸ್ಯೆಗಳ ಬಗ್ಗೆ ಗಮನಹರಿಸುವುದನ್ನು ನಿಲ್ಲಿಸಿ ಎಂದು ಹೇಳಿದರು.
“ಭಾರತವು ಹಲವು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಒಳಚರಂಡಿ ವ್ಯವಸ್ಥೆ, ಪ್ರವಾಹ, ಅಕ್ರಮವಾಗಿ ಪಾರ್ಕಿಂಗ್, ಕಸದ ಸಮಸ್ಯೆ ಮುಂತಾದವು. ಇವುಗಳ ಬಗ್ಗೆ ಗಮನಹರಿಸುವ ಬದಲು ಫೆಲೆಸ್ತೀನ್ ಕುರಿತು ಧ್ವನಿ ಎತ್ತುವುದು ಸೂಕ್ತವಲ್ಲ” ಎಂದು ಪೀಠವು ಉಲ್ಲೇಖಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರಾದ, ಹಿರಿಯ ವಕೀಲ ಮಿಹಿರ್ ದೇಸಾಯಿ, "ಸಿಪಿಐ(ಎಂ) ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪಕ್ಷ. ಈ ಪ್ರತಿಭಟನೆ ವಾಕ್ಸ್ವಾತಂತ್ರ್ಯದ ಭಾಗವಾಗಿದೆ. ಈ ವಿಷಯ ಯಾವುದೇ ಗಡಿ ಬಿಕ್ಕಟ್ಟಿಗೆ ಸಂಬಂಧಪಟ್ಟಿಲ್ಲ ಹಾಗೂ 'ಆಪರೇಷನ್ ಸಿಂಧೂರ್' ಗೆ ಸಂಬಂಧಿಸಿದ್ದಲ್ಲ,” ಎಂದು ಪೀಠದ ಗಮನಕ್ಕೆ ತಂದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಘುಗೆ, “ಸಾವಿರಾರು ಮೈಲು ದೂರದ ಫೆಲೆಸ್ತೀನ್ ಬಗ್ಗೆ ಕಾಳಜಿ ತೋರುತ್ತಿದ್ದೀರಾ? ನಮ್ಮ ದೇಶದ ಜನರ ವಿಷಯದಲ್ಲಿ ನೀವು ಏನು ಮಾಡುತ್ತಿದ್ದೀರಿ? ಫೆಲೆಸ್ತೀನ್ ಪರವಾಗಿ ಮಾತನಾಡುವುದು ದೇಶಭಕ್ತಿಯಲ್ಲ. ದೇಶದ ಬಗ್ಗೆ ಕಾಳಜಿ ತೋರಿಸಿ, ದೇಶಭಕ್ತರಾಗಿ", ಎಂದರು.
"ಅಂತಾರಾಷ್ಟ್ರೀಯ ವಿಷಯಗಳ ಕುರಿತು ನಿಲುವು ತಾಳುವುದು ಕೇಂದ್ರ ಸರ್ಕಾರದ ಕೆಲಸ. ವ್ಯಕ್ತಿಗಳು ಅಥವಾ ಪಕ್ಷಗಳು ಸರಕಾರದ ನಿಲುವಿಗೆ ವಿರುದ್ಧವಾಗಿ ಧ್ವನಿ ಎತ್ತುವುದು, ವಿದೇಶಾಂಗ ನೀತಿಗೆ ಧಕ್ಕೆಯಾಗಬಹುದು”, ಎಂದು ಆತಂಕ ವ್ಯಕ್ತಪಡಿಸಿದ ಪೀಠವು ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ, “ವಾಕ್ಸ್ವಾತಂತ್ರ್ಯವನ್ನು ದುರುಪಯೋಗ ಮಾಡಲಾಗುತ್ತಿದೆ” ಎಂಬ ನಿಲುವು ವ್ಯಕ್ತಪಡಿಸಿತು.
ಈ ಅರ್ಜಿಯು ನೇರವಾಗಿ ಸಿಪಿಐ(ಎಂ) ಯಿಂದ ಸಲ್ಲಿಸಲ್ಪಟ್ಟದ್ದಲ್ಲ ಎಂಬ ಅಂಶವನ್ನೂ ವಿಭಾಗೀಯ ಪೀಠವು ಗಮನಿಸಿತು. ಜೂನ್ 17ರಂದು ಆಲ್ ಇಂಡಿಯಾ ಪೀಸ್ ಅಂಡ್ ಸಾಲಿಡಾರಿಟಿ ಫೌಂಡೇಶನ್ (ಎಐಪಿಎಸ್ಎಫ್) ಸಲ್ಲಿಸಿದ್ದ ಮನವಿಯನ್ನು ಮುಂಬೈ ಪೊಲೀಸರು ತಿರಸ್ಕರಿಸಿದ್ದನ್ನು ಮಾತ್ರ ಆಧಾರವಾಗಿಟ್ಟುಕೊಂಡು ಈ ಅರ್ಜಿ ಸಲ್ಲಿಸಲಾಗಿದೆ. ಸಿಪಿಐ(ಎಂ) ನಿಂದ ಯಾವುದೇ ನೇರ ಮನವಿ ಬಂದಿಲ್ಲ ಎಂದು ಮನಗಂಡ ಬಾಂಬೆ ಹೈಕೋರ್ಟ್ ನ ವಿಭಾಗಿಯ ಪೀಠವು ಅರ್ಜಿಯನ್ನು ತಿರಸ್ಕರಿಸಿತು.







