Hyderabad | ಜನಸೇನಾ ಸಂಸದರ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿ: ಮಹಿಳೆ ಮೃತ್ಯು

Photo Credit : NDTV
ಹೈದರಾಬಾದ್, ಆ.20: ರಾಜ್ಯಸಭಾ ಸದಸ್ಯ ಲಿಂಗಮನೇನಿ ರಮೇಶ್ ಅವರ ಪುತ್ರ ಲಿಂಗಮನೇನಿ ಸಂಜುಷ್ (21) ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದು 26 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೈದರಾಬಾದ್ ನ ಮಾದಾಪುರದಲ್ಲಿ ವರದಿಯಾಗಿದೆ.
ಮೃತರನ್ನು ಭಾರತೀ ಮುಖಿ ಎಂದು ಗುರುತಿಸಲಾಗಿದೆ. ಅವರು ಇನಾರ್ಬಿಟ್ ಮಾಲ್ ನ ಲೈಫ್ಸ್ಟೈಲ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 16ರಂದು ಮಾಧಾಪುರದಲ್ಲಿ ಕೆಲಸದ ಸ್ಥಳದ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರಾಬಾದ್ ಪೊಲೀಸರು ಸಂಜುಷ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಗುರುತಿಸಿದ್ದಾರೆ. ಅವರ ತಂದೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಸಂಜುಷ್ ಅವರನ್ನು ಇನ್ನೂ ಬಂಧಿಸಿಲ್ಲ.
ಮಾಧಾಪುರದ ಸಹಾಯಕ ಪೊಲೀಸ್ ಆಯುಕ್ತ ಸಿ.ಎಚ್. ಶ್ರೀಧರ್ ಅವರು ಸಂಜುಷ್ ಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ಜಾಮೀನು ನೀಡಬಹುದಾದ ಅಪರಾಧವಾಗಿದ್ದು, ಗರಿಷ್ಠ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಹಿನ್ನೆಲೆಯಲ್ಲಿ ಬಂಧಿಸಿಲ್ಲ ಎಂದು ಹೇಳಿದ್ದಾರೆ.
►ಅಪಘಾತ ಹೇಗೆ ಸಂಭವಿಸಿತು?
ಎಫ್ಐಆರ್ ಪ್ರಕಾರ, ಭಾರತೀ ಮತ್ತು ಅವರ ಸಹೋದ್ಯೋಗಿ ಪೂಜಾ ಅಶೋಕ್ (26) ಅವರು ಆಗಸ್ಟ್ 16ರಂದು ಮಧ್ಯಾಹ್ನ 3ರ ಸುಮಾರಿಗೆ ಊಟಕ್ಕೆಂದು ಸಮೀಪದ ಐಟಿಸಿ ಕೊಹೆನೂರ್ ಪ್ರದೇಶಕ್ಕೆ ತೆರಳಿದ್ದರು. ಕೆಲಸದ ಸ್ಥಳಕ್ಕೆ ಹಿಂದಿರುಗುವ ವೇಳೆ ಮಾಲ್ ಮುಂಭಾಗದಲ್ಲಿ ಭಾರತೀ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ತೆಲಂಗಾಣ ನೋಂದಣಿ ಸಂಖ್ಯೆಯ ಆಸ್ಟನ್ ಮಾರ್ಟಿನ್ ಕಾರು ಡಿಕ್ಕಿ ಹೊಡೆದಿದೆ.
ಭಾರತೀ ಅವರ ತಲೆಗೆ ತೀವ್ರ ಗಾಯವಾಗಿದ್ದು, ಭಾರಿ ರಕ್ತಸ್ರಾವವಾಗಿತ್ತು. ಅವರನ್ನು ಅದೇ ಕಾರಿನಲ್ಲಿ ಜುಬಿಲಿ ಹಿಲ್ಸ್ನ ಅಪೋಲೊ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಪೂಜಾ ಅವರು ಅಂಗಡಿ ವ್ಯವಸ್ಥಾಪಕ ಅಶ್ವಿನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಭಾರತೀ ಅವರಿಗೆ ಕಾರು ಡಿಕ್ಕಿ ಹೊಡೆದಾಗ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಲಾಗುತ್ತಿತ್ತು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.






