Mumbai ವಿಮಾನ ನಿಲ್ದಾಣದಲ್ಲಿ SpiceJet ವಿಮಾನಗಳ ಹಾರಾಟ ಸ್ಥಗಿತ: ಪ್ರಯಾಣಿಕರ ಪರದಾಟ; ಗದ್ದಲದ ವಾತಾವರಣ ನಿರ್ಮಾಣ

Photo: India Today
ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಸೋಮವಾರ ಹಾಗೂ ಮಂಗಳವಾರ ಪದೇ ಪದೇ ವಿಮಾನಗಳ ಹಾರಾಟ ವ್ಯತ್ಯಯಗೊಂಡಿದ್ದು, ಸೋಮವಾರದಿಂದ ಒಂದನೇ ಟರ್ಮಿನಲ್ ನಿಂದ ಯಾವುದೇ ವಿಮಾನ ಟೇಕ್ಆಫ್ ಆಗಿಲ್ಲ. ಮಂಗಳವಾರ ರಾತ್ರಿಯೂ ವಿಮಾನಗಳ ಹಾರಾಟದಲ್ಲಿ ಸುಮಾರು 9 ಗಂಟೆಗಳ ವಿಳಂಬವಾಗಿದೆ. ಇದರಿಂದಾಗಿ ಸ್ಪೈಸ್ ಜೆಟ್ ನ ನೂರಾರು ಪ್ರಯಾಣಿಕರು ಪರದಾಡುವಂತಾಯಿತು ಎಂದು ವರದಿಯಾಗಿದೆ.
ನಾವು ರಾತ್ರಿ 7 ಗಂಟೆಯ ವೇಳೆ ವಿಮಾನ ನಿಲ್ದಾಣಕ್ಕೆ ಆಗಮಿಸಿದೆವು. ಆದರೆ, ಆಗಿನಿಂದ ಒಂದೇ ಒಂದು ವಿಮಾನ ಕೂಡಾ ಹಾರಾಟ ನಡೆಸಿಲ್ಲ ಎಂದು ಸ್ಪೈಸ್ ಜೆಟ್ ವಿಮಾನದ ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಹಲವಾರು ಗಂಟೆಗಳ ಅನಿಶ್ಚಿತತೆ ಬಳಿಕ ಬುಧವಾರ ಮುಂಜಾನೆ ಸುಮಾರು 4 ಗಂಟೆಗೆ ವಿಮಾನ ನಿರ್ಗಮಿಸಿದೆ.
ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯಗೊಂಡಿರುವುದರಿಂದ ಸಲಹಾ ಸೂಚಿ ಬಿಡುಗಡೆ ಮಾಡಿರುವ ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆ, “ಮುಂಬೈಗೆ ಆಗಮಿಸುವ ಮತ್ತು ನಿರ್ಗಮಿಸುವ ಕೆಲವು ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವುದಕ್ಕೂ ಮುನ್ನ, ತಮ್ಮ ವಿಮಾನಗಳ ಹಾರಾಟ ಸ್ಥಿತಿಯ ಕುರಿತು ತಿಳಿದುಕೊಳ್ಳಿ. ಇತ್ತೀಚಿನ ಮಾಹಿತಿಗಳಿಗಾಗಿ ಸ್ಪೈಸ್ ಜೆಟ್ ಅನ್ನು ಸಂಪರ್ಕಿಸಿ” ಎಂದು ಹೇಳಿದೆ.
ಸೋಮವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರಿಗೆ ಟರ್ಮಿನಲ್ ಪ್ರವೇಶವನ್ನು ನಿರಾಕರಿಸಲಾಯಿತು. ಇದರಿಂದಾಗಿ, ಪ್ರಯಾಣಿಕರು ತಮ್ಮ ಆಗಮನ ಮತ್ತು ನಿರ್ಗಮನ ವಿಮಾನಗಳ ಕುರಿತು ಯಾವುದೇ ಸ್ಪಷ್ಟತೆ ಇಲ್ಲದೆ ವಿಮಾನ ನಿಲ್ದಾಣದ ಹೊರಗೆ ಕಾಯುವಂತಾಯಿತು. ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆ ವಿಳಂಬದ ಹಿಂದಿನ ಕಾರಣವೇನು ಎಂದು ಮಾಹಿತಿ ನೀಡುವಲ್ಲಿ ಹಾಗೂ ಪರಿಷ್ಕೃತ ನಿರ್ಗಮನ ವೇಳಾಪಟ್ಟಿಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಭಾರಿ ಸಂಖ್ಯೆಯ ಪ್ರಯಾಣಿಕರು ಸ್ಪೈಸ್ ಜೆಟ್ ಕೌಂಟರ್ ಬಳಿ ಜಮಾಯಿಸಿರುವುದು ಹಾಗೂ ದೀರ್ಘಕಾಲದ ವಿಳಂಬ ಹಾಗೂ ಮಾಹಿತಿ ಕೊರತೆಯ ಬಗ್ಗೆ ಆಕ್ರೋಶಗೊಂಡ ಪ್ರಯಾಣಿಕರು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದೆ.
ವಿಮಾನಗಳ ಹಾರಾಟದಲ್ಲಿನ ವ್ಯತ್ಯಯದ ಕುರಿತು ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಆದರೆ, ಪ್ರಯಾಣಿಕರಿಗೆ ಹಣವನ್ನು ಮರುಪಾವತಿ ಮಾಡಲಾಗುವುದು ಹಾಗೂ ಇನ್ನು ಏಳು ದಿನಗಳೊಗಾಗಿ ಅವರ ಹಣವನ್ನು ಜಮಾ ಮಾಡಲಾಗುವುದು ಎಂದು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ.







