ಜನಸಂಖ್ಯೆ ಆಧರಿಸಿ ಸಂಸದೀಯ ಸ್ಥಾನಗಳನ್ನು ನಿರ್ಧರಿಸಬೇಡಿ: ಸ್ಟಾಲಿನ್

ಎಂ.ಕೆ. ಸ್ಟಾಲಿನ್ | PTI
ಚೆನ್ನೈ: ಜನಸಂಖ್ಯೆ ಆಧಾರದಲ್ಲಿ ಮಾತ್ರ ಸಂಸದೀಯ ಕ್ಷೇತ್ರಗಳನ್ನು ನಿರ್ಧರಿಸುವ ಮೂಲಕ ದಕ್ಷಿಣದ ರಾಜ್ಯಗಳನ್ನು ದಂಡಿಸಬೇಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಹೇಳಿದ್ದಾರೆ.
ಅಂತಹ ಪ್ರಯತ್ನವನ್ನು ವಿರೋಧಿಸಲಾಗುವುದು ಎಂದು ಅವರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಂಸದೀಯ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆ ಮೂಲಕ ರಾಜ್ಯಕ್ಕೆ ಅನ್ಯಾಯವಾದರೆ ತಮಿಳುನಾಡು ಹಾಗೂ ಡಿಎಂಕೆ ಅದನ್ನು ಎಂದಿಗೂ ಸಹಿಸಲಾರದು ಎಂದು ಅವರು ಹೇಳಿದ್ದಾರೆ.
‘‘ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಜನಸಂಖ್ಯೆಯ ಆಧಾರದಲ್ಲಿ ಮಾತ್ರ ಸಂಸದೀಯ ಕ್ಷೇತ್ರಗಳನ್ನು ನಿರ್ಣಯಿಸಬೇಡಿ. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಲು ಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಂಡ ದಕ್ಷಿಣದ ರಾಜ್ಯಗಳನ್ನು ದಂಡಿಸಬೇಡಿ’’ ಎಂದು ಸ್ಟಾಲಿನ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
‘‘ನಾವು ತಮಿಳುನಾಡಿನ ಕಲ್ಯಾಣ ಹಾಗೂ ಯಾರೊಬ್ಬರ ಭವಿಷ್ಯದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ನಾವು ಸಂಘಟಿತರಾಗಬೇಕು ಹಾಗೂ ನಮ್ಮ ರಾಜ್ಯದ ಹಕ್ಕುಗಳಿಗಾಗಿ ಹೋರಾಡಬೇಕು. ಕೇಂದ್ರದ ನಡೆಯನ್ನು ತಮಿಳುನಾಡು ವಿರೋಧಿಸುತ್ತದೆ ಹಾಗೂ ಜಯ ಗಳಿಸುತ್ತದೆ’’ ಎಂದು ಸ್ಟಾಲಿನ್ ಹೇಳಿದ್ದಾರೆ.
‘‘ನೀವು ಈ ಸಂದೇಶವನ್ನು ಜನರಿಗೆ ತಲುಪಿಸಬೇಕು. ನೀವು ಪ್ರತಿಯೊಬ್ಬರು ನಮ್ಮ ರಾಜ್ಯವನ್ನು ರಕ್ಷಿಸಲು ಧ್ವನಿ ಎತ್ತಬೇಕು. ನೀವು ದೇಶಕ್ಕೆ ದಾರಿ ತೋರಿಸುವ ಸೈದ್ಧಾಂತಿಕತೆಯ ಪ್ರವರ್ತಕರು’’ ಎಂದು ಸ್ಟಾಲಿನ್ ಒತ್ತಿ ಹೇಳಿದ್ದಾರೆ.







