Tamil Nadu| ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಪ್ರತಿಭಟನೆ: ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿದ ಸಿಎಂ ಸ್ಟಾಲಿನ್; ಕಪ್ಪು ಬಾವುಟ ಹಾರಾಟ

Photo: X/@mkstalin
ಚೆನ್ನೈ: ತಮಿಳುನಾಡಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿದ್ದು, ಕಪ್ಪು ಬಾವುಟ ಹಾರಾಟ ನಡೆಸುವ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ಸರಕಾರ ಗುರುವಾರದಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಅಧಿವೇಶನದಲ್ಲಿ ಮೂರು ಪ್ರಮುಖ ಮಸೂದೆ ಮಂಡಿಸಲು ಯೋಜಿಸಲಾಗಿದೆ. ಇದರಿಂದ ಸಂಸತ್ನಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ.
ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡನೆ ಮಸೂದೆಯನ್ನು ʼಕರಾಳ ಕಾನೂನುʼ ಎಂದು ಕರೆದ ಸಿಎಂ ಸ್ಟಾಲಿನ್, ಕಪ್ಪು ಉಡುಪು ಧರಿಸಿ ಕಪ್ಪು ಧ್ವಜವನ್ನು ಪ್ರದರ್ಶಿಸಿದರು. ಮಸೂದೆಯ ಪ್ರತಿಯನ್ನು ಸುಟ್ಟುಹಾಕಿದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ತಮಿಳುನಾಡಿನಾದ್ಯಂತ ವ್ಯಾಪಕ ಪ್ರತಿಭಟನೆಗೆ ಕರೆ ನೀಡಿದ್ದಾರೆ. "ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಯಲಿ, ಫ್ಯಾಸಿಸ್ಟ್ ಬಿಜೆಪಿಯ ದುರಹಂಕಾರ ಕುಸಿಯಲಿ" ಎಂದು ಹೇಳಿದ್ದಾರೆ.




