ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಬೆನ್ನಲ್ಲೇ ಷೇರು ಮಾರುಕಟ್ಟೆ ಜಿಗಿತ

ಸಾಂದರ್ಭಿಕ ಚಿತ್ರ (PTI)
ಒಪ್ಪಂದವು ಪರಸ್ಪರ ತೆರಿಗೆಗಳನ್ನು ಕಡಿತಗೊಳಿಸುವುದರ ಜೊತೆಗೆ, ಭಾರತದ ರಷ್ಯಾ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದ ದಂಡಗಳನ್ನು ತೆಗೆದುಹಾಕಿದೆ. ಹೀಗಾಗಿ ಷೇರುಗಳು, ಕರೆನ್ಸಿ ಮತ್ತು ಬಾಂಡ್ಗಳಲ್ಲಿ ವ್ಯಾಪಕ ಏರಿಕೆ ಕಂಡಿವೆ.
ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದ ಘೋಷಣೆಯ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆ ತೀವ್ರ ಜಿಗಿತ ಕಂಡುಬಂದಿದೆ.
ಸೆನ್ಸೆಕ್ಸ್ 85,323ಕ್ಕೆ ಆರಂಭವಾಗಿ ನಿನ್ನೆ ದಿನದಾಂತ್ಯಕ್ಕಿಂತ ಸುಮಾರು ಶೇ 4.5 ರಷ್ಟು ಏರಿಕೆಯಾಗಿದೆ. ನಿಫ್ಟಿ 26,308ಕ್ಕೆ ಆರಂಭವಾಯಿತು. ಹಿಂದಿನ 25,088 ಮಟ್ಟದ ಹೋಲಿಕೆಯಲ್ಲಿ ಹೆಚ್ಚಳ ಕಂಡಿತು. ಆರಂಭಿಕ ಉತ್ಸಾಹ ಸ್ವಲ್ಪ ತಗ್ಗಿದರೂ, ಮಾರುಕಟ್ಟೆಗಳು ಇನ್ನೂ ಶೇ 2.7 ಗಿಂತ ಹೆಚ್ಚಿನ ಲಾಭವನ್ನು ಕಾಯ್ದುಕೊಂಡವು.
ರೂಪಾಯಿ ಬೆಲೆ ಕೂಡ ಏರಿಕೆ ಕಂಡುಬಂದು ಡಾಲರ್ಗೆ ಸುಮಾರು 90.40 ಮಟ್ಟದಲ್ಲಿ ಬಲವಾಗಿ ನಿಂತಿದೆ. ಶೇ 1.2ರಷ್ಟು ಬಲಗೊಂಡಿದೆ.
ಒಪ್ಪಂದದ ಘೋಷಣೆಯ ನಂತರ ಮಾರುಕಟ್ಟೆಯ ವ್ಯಾಪ್ತಿ ಸ್ಪಷ್ಟವಾಗಿ ಧನಾತ್ಮಕವಾಗಿತ್ತು. NSEಯಲ್ಲಿ ವಹಿವಾಟಾದ 3,010 ಷೇರುಗಳಲ್ಲಿ 2,587 ಏರಿಕೆಯಾದರೆ, ಕೇವಲ 349 ಮಾತ್ರ ಇಳಿಕೆಯಾಯಿತು.
ನಿಫ್ಟಿಯ ಘಟಕ ಷೇರುಗಳಲ್ಲಿ ಅದಾನಿ ಎಂಟರ್ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ಲಾಭದಲ್ಲಿ ಮುಂಚೂಣಿಯಲ್ಲಿದ್ದು, ಕ್ರಮವಾಗಿ ಶೇ 10 ಮತ್ತು ಶೇ 7.5 ಗಿಂತ ಹೆಚ್ಚು ಏರಿಕೆಯಾಯಿತು. ಇಂದು ಬೆಳಗ್ಗೆ ನಿಫ್ಟಿಯಲ್ಲಿನ ಕೇವಲ ಮೂರು ಷೇರುಗಳು — ನೆಸ್ಲೆ, ಓಎನ್ಜಿಸಿ ಮತ್ತು ಕೋಲ್ ಇಂಡಿಯಾ — ನಷ್ಟದಲ್ಲಿ ವಹಿವಾಟಾಗುತ್ತಿದ್ದವು.
ಈ ಒಪ್ಪಂದವು ಪರಸ್ಪರ ತೆರಿಗೆಗಳನ್ನು ಕಡಿತಗೊಳಿಸುವುದರ ಜೊತೆಗೆ, ಭಾರತದ ರಷ್ಯಾ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದ ದಂಡಗಳನ್ನು ತೆಗೆದುಹಾಕಿದೆ. ಹೀಗಾಗಿ ಷೇರುಗಳು, ಕರೆನ್ಸಿ ಮತ್ತು ಬಾಂಡ್ಗಳಲ್ಲಿ ವ್ಯಾಪಕ ಏರಿಕೆ ಕಂಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಒಪ್ಪಂದದ ಕುರಿತು ದೃಢಪಡಿಸಿದ್ದಂತೆ, ಅಮೆರಿಕವು ಭಾರತೀಯ ಸರಕುಗಳ ಮೇಲೆ ವಿಧಿಸಿದ್ದ ಪರಸ್ಪರ ತೆರಿಗೆಗಳನ್ನು ಗರಿಷ್ಠ ಶೇ 50 ರಿಂದ ಶೇ 18 ಕ್ಕೆ ಇಳಿಸುವುದಾಗಿ ಹಾಗೂ ಭಾರತದ ರಷ್ಯನ್ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿ ವಿಧಿಸಿದ್ದ ಹೆಚ್ಚುವರಿ ಸುಂಕವನ್ನು ತೆಗೆದುಹಾಕುವುದಾಗಿ ತಿಳಿಸಿದೆ.
ಅಧಿಕೃತವಾಗಿ ಒಪ್ಪಂದದ ವಿವರ ಬಹಿಂರಗವಾಗಲು ಸಮಯ ಹಿಡಿಯಬಹುದಾದರೂ, ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಕೃಷಿ, ಇಂಧನ, ತಂತ್ರಜ್ಞಾನ ಮತ್ತು ಇತರ ವಸ್ತುಗಳನ್ನು ಖರೀದಿಸಲು ಬದ್ಧವಾಗಿದೆ.







