Hyderabad | ದಾಂಡಿಯಾ ಕಾರ್ಯಕ್ರಮದಲ್ಲಿ ಕಮಾನು ಕುಸಿತ: ವಿದ್ಯಾರ್ಥಿನಿ ಮೃತ್ಯು, 14 ಮಂದಿಗೆ ಗಾಯ

Photo credit : ANI
ಹೈದರಾಬಾದ್: ಇಲ್ಲಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಶನಿವಾರ ನಡೆದ ದಾಂಡಿಯಾ ಕಾರ್ಯಕ್ರಮದ ವೇಳೆ ದೀಪಾಲಂಕಾರ ಮಾಡಲಾಗಿದ್ದ ಕಮಾನು ಕುಸಿದು ಬಿದ್ದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಳಿಯ ರಭಸಕ್ಕೆ ಕಮಾನು ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಇತರ 14 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವಿಗೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಾಂತ್ವನ ತಿಳಿಸಿರುವ ಅವರು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸರಕಾರಿ ಪ್ರಕಟಣೆ ತಿಳಿಸಿದೆ.
ಅಪಘಾತಕ್ಕೆ ಕಾರಣರಾದವರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.




