16 ವರ್ಷಕ್ಕಿಂತ ಕೆಳಗಿನ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ, ಹುಸಿ ಭರವಸೆಗಳನ್ನು ನೀಡುವಂತಿಲ್ಲ
ಕೋಚಿಂಗ್ ಸೆಂಟರ್ ಗಳಿಗೆ ಕೇಂದ್ರದ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ : ಕೇಂದ್ರ ಶಿಕ್ಷಣ ಸಚಿವಾಲಯವು ಹೊರಡಿಸಿರುವ ನೂತನ ಮಾರ್ಗಸೂಚಿಗಳಂತೆ ಕೋಚಿಂಗ್ ಸೆಂಟರ್ಗಳು 16 ವರ್ಷಕ್ಕಿಂತ ಕೆಳಗಿನ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತಿಲ್ಲ, ದಾರಿ ತಪ್ಪಿಸುವ ಭರವಸೆಗಳನ್ನು ಹಾಗೂ ರ್ಯಾಂಕ್ ಅಥವಾ ಉತ್ತಮ ಅಂಕ ಗಳಿಕೆಯ ಗ್ಯಾರಂಟಿಯನ್ನು ನೀಡುವಂತಿಲ್ಲ.
ಕಾನೂನು ಚೌಕಟ್ಟಿನ ಅಗತ್ಯವನ್ನು ಪೂರೈಸಲು ಹಾಗೂ ಖಾಸಗಿ ಕೋಚಿಂಗ್ ಸೆಂಟರ್ಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ ಹಾಕಲು ಈ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಕೋಚಿಂಗ್ ಸೆಂಟರ್ಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು, ಬೆಂಕಿ ಅವಘಡಗಳು, ಸೌಲಭ್ಯಗಳ ಕೊರತೆ ಹಾಗು ಅವು ಅಳವಡಿಸಿಕೊಂಡಿರುವ ಬೋಧನಾ ವಿಧಾನಗಳ ಕುರಿತು ಸರಕಾರವು ದೂರುಗಳನ್ನು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳು ಹೊರಬಿದ್ದಿವೆ.
ಕೋಚಿಂಗ್ ಸೆಂಟರ್ಗಳು ಪದವಿಗಿಂತ ಕಡಿಮೆ ವಿದ್ಯಾರ್ಹತೆಯನ್ನು ಹೊಂದಿರುವವರನ್ನು ಬೋಧಕರನ್ನಾಗಿ ನೇಮಿಸಿಕೊಳ್ಳುವಂತಿಲ್ಲ. ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪರೀಕ್ಷೆಯನ್ನು ಮುಗಿಸಿದ ಬಳಿವಷ್ಟೇ ಅವರಿಗೆ ಪ್ರವೇಶವನ್ನು ನೀಡಬೇಕು. ಕೋಚಿಂಗ್ ಸಂಸ್ಥೆಗಳು ಬೋಧನೆಯ ಗುಣಮಟ್ಟ, ಸೌಲಭ್ಯಗಳು ಮತ್ತು ಫಲಿತಾಂಶಗಳಿಗೆ ಸಂಬಂಧಿಸಿದಂತೆ ಯಾವುದೇ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ. ನೈತಿಕ ಅಪರಾಧ ಸೇರಿದಂತೆ ಯಾವುದೇ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾದ ಬೋಧಕರು ಅಥವಾ ವ್ಯಕ್ತಿಗಳನ್ನು ನೇಮಿಸಿಕೊಳ್ಳುವಂತಿಲ್ಲ. ಈ ಮಾರ್ಗಸೂಚಿಗಳ ಅಗತ್ಯಗಳಿಗೆ ಅನುಗುಣವಾದ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಹೊಂದಿರದ ಯಾವುದೇ ಸಂಸ್ಥೆಯನ್ನು ನೋಂದಣಿ ಮಾಡುವಂತಿಲ್ಲ. ಕೋಚಿಂಗ್ ಸೆಂಟರ್ಗಳು ಬೋಧಕರ ವಿದ್ಯಾರ್ಹತೆ, ಕೋರ್ಸ ಗಳು/ಪಠ್ಯಕ್ರಮ, ಅವಧಿ, ಹಾಸ್ಟೆಲ್ ಸೌಲಭ್ಯಗಳು ಮತ್ತು ಶುಲ್ಕಗಳಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಒಳಗೊಂಡಿರುವ ವೆಬ್ಸೈಟ್ ಗಳನ್ನು ಹೊಂದಿರಬೇಕು ಎಂದು ನೂತನ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಕಠಿಣ ಸ್ಪರ್ಧೆ ಮತ್ತು ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡದಿಂದಾಗಿ ಕೋಚಿಂಗ್ ಸೆಂಟರ್ ಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅವರ ಮೇಲೆ ಅನಗತ್ಯ ಒತ್ತಡಗಳನ್ನು ಹೇರದೇ ತರಗತಿಗಳನ್ನು ನಡೆಸಬೇಕು ಇತ್ಯಾದಿ ಸೂಚನೆಗಳನ್ನು ಈ ಮಾರ್ಗದರ್ಶಿಗಳಲ್ಲಿ ನೀಡಲಾಗಿದೆ.