ವಿದ್ಯಾರ್ಥಿಗಳೊಂದಿಗೆ ಈ ರೀತಿ ನಡೆದುಕೊಳ್ಳಬಾರದು: ಪೊಲೀಸ್ ಕ್ರಮ ಖಂಡಿಸಿದ ನಟ ದಿಲ್ಜಿತ್ ದೋಸಾಂಜ್

ದಿಲ್ಜಿತ್ ದೋಸಾಂಜ್ | Photo Credit : Special Arrangement
ಹೊಸದಿಲ್ಲಿ: NEET ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಹೊಸದಿಲ್ಲಿಯಲ್ಲಿ ಪೊಲೀಸರು ನಡೆಸಿದ ಬಲಪ್ರಯೋಗವನ್ನು ಪಂಜಾಬಿ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅವರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಬೃಹತ್ 'ಚಲೋ ಸಂಸದ್' ಮೆರವಣಿಗೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಕ್ರಮದ ಕುರಿತು ದಿಲ್ಜಿತ್, Instagramನಲ್ಲಿ ಪ್ರತಿಕ್ರಿಯಿಸಿದ್ದಾರೆ.
Credit: Instagram/@diljitdosanjh
"ಇಂದು ನಡೆದದ್ದು ತುಂಬಾ ತಪ್ಪಾಗಿದೆ. ವಿದ್ಯಾರ್ಥಿಗಳನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಅಧಿಕಾರಿಗಳು ಆಲಿಸಬೇಕು ಎಂದು ನಾನು ವಿನಂತಿಸುತ್ತೇನೆ" ಎಂದು ಅವರು ಬರೆದಿದ್ದಾರೆ.
NEET ಅಕ್ರಮಗಳ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿರುವ ದಿಲ್ಜಿತ್, ಅವರ ನ್ಯಾಯಸಮ್ಮತ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.
2020ರಲ್ಲಿ ನಡೆದ ರೈತರ ಪ್ರತಿಭಟನೆಗೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ ಬಳಿಕ ತಾವು ವೈಯಕ್ತಿಕ ಹಾಗೂ ಕಾನೂನು ಸಂಬಂಧಿತ ಹಲವು ಸಮಸ್ಯೆಗಳನ್ನು ಎದುರಿಸಿದ್ದಾಗಿ ದಿಲ್ಜಿತ್ ಹೇಳಿದ್ದಾರೆ.
"ನನ್ನನ್ನು ಈಗಾಗಲೇ ಹಲವು ಬಾರಿ 'ರಾಷ್ಟ್ರವಿರೋಧಿ' ಎಂದು ಹಣೆಪಟ್ಟಿ ಕಟ್ಟಲಾಗಿದೆ. ಈಗಲೂ ಮತ್ತೆ ಅದೇ ರೀತಿ ಕರೆಯುತ್ತಾರೆ ಎಂಬುದು ನನಗೆ ಗೊತ್ತಿದೆ. ರೈತರ ಪ್ರತಿಭಟನೆಯ ಬಳಿಕ ನಾನು ಇನ್ನೂ ಬಹಿರಂಗವಾಗಿ ಹೇಳಲಾಗದಷ್ಟು ತೀವ್ರ ಪ್ರತಿಕ್ರಿಯೆಗಳು ಹಾಗೂ ಕಾನೂನು ಸಮಸ್ಯೆಗಳನ್ನು ಎದುರಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ 'ಚಲೋ ಸಂಸದ್' ಪ್ರತಿಭಟನೆಯನ್ನು ಕಾಕ್ರೋಚ್ ಜನತಾ ಪಕ್ಷ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಆಯೋಜಿಸಿದ್ದರು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನ ಜಂತರ್ ಮಂತರ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಜಮಾಯಿಸಿ ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಮುಂದಾದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು.
ಸಂಸತ್ ಭವನದತ್ತ ಸಾಗಲು ಪ್ರತಿಭಟನಾಕಾರರು ಯತ್ನಿಸಿದಾಗ ಭದ್ರತಾ ಪಡೆಗಳು ಅವರನ್ನು ತಡೆಯಲು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ಸೇರಿದಂತೆ ಬಲಪ್ರಯೋಗ ನಡೆಸಿದವು. ಇದರಿಂದ ಹಲವರು ಗಾಯಗೊಂಡಿದ್ದು, ಹಲವರ ಬಂಧನಗಳೂ ನಡೆದಿವೆ.
ಇದಕ್ಕೂ ಮುನ್ನ ತಿಂಗಳ ಆರಂಭದಲ್ಲಿ Instagram Liveನಲ್ಲಿ ಮಾತನಾಡಿದ್ದ ದಿಲ್ಜಿತ್, ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಸಿಜೆಪಿ ಪ್ರತಿಭಟನೆಗಳಿಂದ ತಾವು ದೂರವಿರುವುದಾಗಿ ಸ್ಪಷ್ಟಪಡಿಸಿದ್ದರು.
ಅಭಿಮಾನಿಯೊಬ್ಬರು, "ನೀವು ಪ್ರತಿಭಟನೆಯಲ್ಲಿ ಭಾಗವಹಿಸುತ್ತೀರಾ?" ಎಂದು ಪ್ರಶ್ನಿಸಿದಾಗ, "ಇದೆಲ್ಲದಿಂದ ನನ್ನನ್ನು ದೂರವಿಡಿ ಸಹೋದರ. ನಾನು ಕಲಾವಿದ. ರಾಜಕಾರಣಿಯಲ್ಲ. ನೀವು ನನ್ನನ್ನು ಏನೆಂದು ಭಾವಿಸುತ್ತೀರೋ ಗೊತ್ತಿಲ್ಲ" ಎಂದು ಅವರು ಉತ್ತರಿಸಿದ್ದರು.






