ನೂಹ್ ಹಿಂಸಾಚಾರದ ಕುರಿತು 'ಸುಳ್ಳು, ದಾರಿತಪ್ಪಿಸುವ' ಪೋಸ್ಟ್: ಸುದರ್ಶನ್ ನ್ಯೂಸ್ ನ ಸ್ಥಾನಿಕ ಸಂಪಾದಕನ ಬಂಧನ

ಹೊಸದಿಲ್ಲಿ: ನೂಹ್ ಹಾಗೂ ಹರ್ಯಾಣ ಇತರ ಜಿಲ್ಲೆಗಳಲ್ಲಿ ನಡೆದ ಕೋಮು ಹಿಂಸಾಚಾರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಂಚಿಕೊಂಡ ಆರೋಪದ ಮೇಲೆ ಹಿಂದಿ ಸುದ್ದಿ ವಾಹಿನಿಯ ಸ್ಥಾನಿಕ ಸಂಪಾದಕನನ್ನು ಗುರುಗ್ರಾಮ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸುದರ್ಶನ್ ನ್ಯೂಸ್ ನ ರೆಸಿಡೆಂಟ್ ಎಡಿಟರ್ ಮುಖೇಶ್ ಕುಮಾರ್ ಅವರನ್ನು ಗುರುಗ್ರಾಮದ ಸೆಕ್ಟರ್ 17 ರಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಮಾರ್ ಅವರನ್ನು ಕೆಲವು "ಗೂಂಡಾಗಳು" ಅಪಹರಿಸಿದ್ದಾರೆ ಎಂದು ಚಾನೆಲ್ ಆರಂಭದಲ್ಲಿ ಹೇಳಿಕೊಂಡಿತ್ತು. ಆದರೆ, ಸೈಬರ್ ಕ್ರೈಂ ವಿಭಾಗದಿಂದ ಅವರನ್ನು ಬಂಧಿಸಲಾಗಿದೆ ಎಂದು ಗುರುಗ್ರಾಮ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (VHP) ಮೆರವಣಿಗೆಯ ಮೇಲೆ ಗುಂಪು ದಾಳಿ ಮಾಡಿದಾಗ ನೂಹ್ ನಲ್ಲಿ ನಡೆದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ಓರ್ವ ಧರ್ಮಗುರು ಸೇರಿದ್ದಾರೆ.
ಕತರ್ ಮೂಲದ ಅಲ್ ಜಝೀರಾ ಸುದ್ದಿ ವಾಹಿನಿಯ ಒತ್ತಡದಿಂದಾಗಿ ಗುರುಗ್ರಾಮ್ ಪೊಲೀಸರು 'ಹಿಂದೂ ಕಾರ್ಯಕರ್ತರ' ವಿರುದ್ಧ ಕ್ರಮಕೈಗೊಳ್ಳುತ್ತಿದ್ದಾರೆ ಎಂದು ಕುಮಾರ್ ಟ್ವೀಟ್ ಮಾಡಿದ್ದಾರೆ.
ಕೋಮುಗಲಭೆಗಳಿಗೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದೇಶಿ ಮಾಧ್ಯಮಗಳು ಗುರುಗ್ರಾಮ್ ಪೊಲೀಸ್ ಕಮಿಷನರ್ ಕಲಾ ರಾಮಚಂದ್ರನ್ ಅವರಿಗೆ ಕರೆ ಮಾಡುತ್ತಿವೆ ಎಂದು ಕುಮಾರ್ ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.
ಗುರುಗ್ರಾಮ್ ಪೊಲೀಸರು ಕುಮಾರ್ ಅವರ ಪೋಸ್ಟ್ ಅನ್ನು "ಆಧಾರರಹಿತ, ಸುಳ್ಳು ಮತ್ತು ತಪ್ಪುದಾರಿಗೆಳೆಯುತ್ತದೆ” ಎಂದು ಹೇಳಿದ್ದಾರೆ, ಕುಮಾರ್ ಅವರ ವಿರುದ್ಧ ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಬಂಧನವು ಸಂಪೂರ್ಣವಾಗಿ ಕಾನೂನುಬಾಹಿರ ಹಾಗೂ ತಪ್ಪು. ಸುದರ್ಶನ್ ನ್ಯೂಸ್ ಮುಖೇಶ್ ಕುಮಾರ್ ಅವರ ಪರವಾಗಿ ನಿಂತಿದೆ ಹಾಗೂ ಅವರ ಬಂಧನವನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸುತ್ತದೆ ”ಎಂದು ಚಾನೆಲ್ ಟ್ವೀಟ್ ಮಾಡಿದೆ.
ಸುದರ್ಶನ ನ್ಯೂಸ್ ನ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪೋಸ್ಟ್ನಲ್ಲಿ ಕುಮಾರ್ ಬಂಧನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
"ಪೊಲೀಸರು ಸಮವಸ್ತ್ರದಲ್ಲಿದ್ದಾಗ ಮುಕೇಶ್ ಕುಮಾರ್ ಅವರನ್ನು ಏಕೆ ಬಂಧಿಸಲಿಲ್ಲ? ಹರ್ಯಾಣ ಸರಕಾರವು ಅಧಿಕಾರಿಯ ಅಹಂಕಾರಕ್ಕೆ ತಲೆಬಾಗುತ್ತಿದೆಯೇ? ಪತ್ರಕರ್ತರು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಎಲ್ಲಿವೆ? ಎಂದು ಸುರೇಶ್ ಚವ್ಹಾಂಕೆ ಟ್ವೀಟಿಸಿದ್ದಾರೆ.
ಒಂದು ಗಂಟೆಯ ನಂತರ ಕುಮಾರ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸುರೇಶ್ ಹೇಳಿಕೊಂಡಿದ್ದಾರೆ. ಆದರೆ ಗುರುಗ್ರಾಮ ಪೊಲೀಸರು ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.







