ಸೂಫಿ ಚಿಂತನೆ ನನ್ನ ಮೇಲೆ ಗಾಢ ಪ್ರಭಾವ ಬೀರಿದೆ : ಎ.ಆರ್. ರಹ್ಮಾನ್

ಎ.ಆರ್. ರಹ್ಮಾನ್
ಚೆನ್ನೈ: ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಅವರು ತಮ್ಮ ಸೂಫಿ ಚಿಂತನೆ ಹಾಗೂ ಅದು ಅವರ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
1980 ರ ದಶಕದಲ್ಲಿ ಸ್ವತಂತ್ರ ಸಂಗೀತ ಸಂಯೋಜಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಕಾಲಘಟ್ಟದಲ್ಲಿ ರಹ್ಮಾನ್ ಅವರಿಗೆ ಸೂಫಿಸಂ ಕಡೆಗಿನ ಸೆಳೆತ ತೀವ್ರವಾಯಿತು. ತಾನು ಹೊಸ ಧರ್ಮವನ್ನು ಸ್ವೀಕರಿಸಿದ ಬಳಿಕ ವೃತ್ತಿಪರ ಜೀವನವು ಸರಿಯಾಗಿ ನೆಲೆಕಂಡುಕೊಂಡವು, ವಿಷಯಗಳು ಸರಿಯಾದ ಮಾರ್ಗದಲ್ಲಿ ಚಲಿಸಲರಾಂಭಿಸಿದವು ಎಂದು ರಹ್ಮಾನ್ ಹೇಳಿದ್ದಾರೆ.
ತಾನು ಹಾಗೂ ಕುಟುಂಬ ಹೊಸ ಧರ್ಮ ಸ್ವೀಕರಿಸಿದ ಬಳಿಕ ಜಾಸ್ತಿ ನೆಮ್ಮದಿಯನ್ನು ಕಂಡುಕೊಂಡಿದ್ದೇನೆ ಎಂದು ಎ.ಆರ್. ರಹ್ಮಾನ್ ಹೇಳಿದ್ದಾರೆ.
The Glenn Gould Foundation ಜೊತೆ ನಡೆಸಿದ ಸಂವಾದದಲ್ಲಿ ಎ.ಆರ್. ರಹ್ಮಾನ್ ಅವರು ತಮ್ಮ ತಂದೆಯ ಕಷ್ಟ ಕಾಲದಲ್ಲಿ ಹಲವಾರು ಸಂತರನ್ನು, ಆಧ್ಯಾತ್ಮಿಕ ಗುರುಗಳನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಆ ವೇಳೆ ಆಧ್ಯಾತ್ಮಿಕ ಗುರುವೊಬ್ಬರು 10 ವರ್ಷಗಳ ಬಳಿಕ ನಾವು ಅವರ ಬಳಿ ಮರಳಿ ಹೋಗುವುದಾಗಿ ಭವಿಷ್ಯ ನುಡಿದಿದ್ದರು. ಅದರ ಬಳಿಕ ನಮ್ಮ ತಂದೆ ತೀರಿ ಹೋದರು, ನಾವೂ ಅದನ್ನೆಲ್ಲಾ ಮರೆತಿದ್ದೆವು. ಸುಮಾರು 10 ವರ್ಷಗಳ ನಂತರ ಸಿಂಗಾಪುರದಿಂದ ಸ್ಟುಡಿಯೋ ಉಪಕರಣಗಳನ್ನು ತರುವಾಗ ಕಸ್ಟಮ್ಸ್ನಲ್ಲಿ ಸಿಲುಕಿಕೊಂಡಿತ್ತು. ಆ ಸಮಯದಲ್ಲಿ ಭಾರತೀಯ ಕಸ್ಟಮ್ಸ್ ಬಹಳ ಕಟ್ಟುನಿಟ್ಟಾಗಿತ್ತು. ಆಗ ನನ್ನನ್ನು ನೋಡಿದ ಅವರ ಶಿಷ್ಯರೊಬ್ಬರು ನನಗೆ ಸಹಾಯ ಮಾಡಿದರು, ಅವರು ಕಸ್ಟಮ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಅದರ ಬಳಿಕ ಹೊಸ ಸಾಮ್ರಾಜ್ಯವನ್ನು ನಿರ್ಮಿಸಿದಂತೆ ಅನಿಸತೊಡಗಿತು. ಕೆಲಸಗಳೆಲ್ಲವೂ ಸರಾಗವಾಗತೊಡಗಿತು, ಹಳೆಯ ಸ್ಟುಡಿಯೋದಿಂದ ಈಗಿರುವ ಹೊಸ ಸ್ಟುಡಿಯೋಗೆ ಬಂದೆವು. ಸ್ಟುಡಿಯೋಗೆ ಸೂಫಿಗುರುವಿನ ಆಶಿರ್ವಾದವೂ ದೊರೆಯಿತು ಎಂದು ರಹ್ಮಾನ್ ಅವರು ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ಸೂಫಿಗುರುವಿನ ಬೋಧನೆಗಳು ಒಂದು ರೀತಿಯ ಸಮಾಧಾನವನ್ನು ತನ್ನ ಬದುಕಿನಲ್ಲಿ ತಂದವು. ಯಾರು ಕೂಡಾ ಈ ಧರ್ಮಕ್ಕೆ ಬನ್ನಿ ಎಂದು ಕರೆದಿರಲಿಲ್ಲ, ಆದರೆ, ಇದರಲ್ಲಿ ನಾನು ಹೆಚ್ಚು ನೆಮ್ಮದಿ ಕಂಡುಕೊಂಡಿದ್ದೆ. ಇದರಲ್ಲೇನೋ ವಿಶೇಷವಿದೆ ಅನಿಸಿತ್ತು. ಈ ಹಂತದಲ್ಲಿ ಹೊಸ ನಂಬಿಕೆಯನ್ನು ಆರಿಸುವ ಬಗ್ಗೆ ತಾಯಿಯಲ್ಲಿ ಹೇಳಿದ್ದೆ, ಅವರೂ ಒಪ್ಪಿಕೊಂಡರು ಎಂದು ರಹ್ಮಾನ್ ಹೇಳಿದ್ದಾರೆ.
ಅವರ ಧರ್ಮ ಬದಲಾವಣೆಯಿಂದಾಗಿ ಕುಟುಂಬವು ಯಾವುದೇ ಸಾಮಾಜಿಕ ಬದಲಾವಣೆಗಳನ್ನು ಎದುರಿಸಬೇಕಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ರಹ್ಮಾನ್, ಭಾರತೀಯರು ಜನರನ್ನು ತುಂಬಾ ಒಪ್ಪಿಕೊಳ್ಳುವವರು, ಹಾಗಾಗಿ, ನಾವು ಯಾವುದೇ ರೀತಿಯ ತಾರತಮ್ಯವನ್ನು ಎದುರಿಸಲಿಲ್ಲ ಎಂದು ಹೇಳಿದರು.
"ಭಾರತೀಯರು ತುಂಬಾ ಮುಕ್ತ ಜನರು, ವಿಶೇಷವಾಗಿ ದಕ್ಷಿಣದಲ್ಲಿ, ಅವರು ತುಂಬಾ ಮುಕ್ತರು, ತುಂಬಾ ಅಪ್ಪಿಕೊಳ್ಳುತ್ತಾರೆ ಮತ್ತು ಅವರು ಸಂತೋಷದ ಜನರು. ಎಲ್ಲರೂ ಬದುಕಬೇಕು ಮತ್ತು ಬದುಕಲು ಬಿಡಬೇಕು ಎಂದು ಅವರು (ಭಾರತೀಯರು) ಬಯಸುತ್ತಾರೆ” ಎಂದು ರಹಮಾನ್ ಹೇಳಿದ್ದಾರೆ.
ಭಾರತದಲ್ಲಿನ ಪರಿಸ್ಥಿತಿಯು ಬಹುಮಟ್ಟಿಗೆ ಒಂದೇ ರೀತಿಯಿದೆ. ಆದರೆ ಕಳೆದ ಕೆಲವು ವರ್ಷಗಳು ರಾಜಕೀಯ ಸಂಗತಿಗಳಿಂದಾಗಿ ವಿಚಿತ್ರವಾಗಿದೆ ಎಂದು ರಹ್ಮಾನ್ ಹೇಳಿದರು.







