ಮಹಾದೇವ್ ಆ್ಯಪ್ ಪ್ರಕರಣದಲ್ಲಿ ಕಪಿಲ್ ಶರ್ಮ, ಹೂಮಾ ಖುರೇಷಿ ಹಾಗೂ ಹೀನಾ ಖಾನ್ ಗೆ ಸಮನ್ಸ್ ಜಾರಿ

ಕಪಿಲ್ ಶರ್ಮ, ಹೂಮಾ ಖುರೇಷಿ ಹಾಗೂ ಹೀನಾ ಖಾನ್
ಹೊಸದಿಲ್ಲಿ: ಗೇಮ್ ಆ್ಯಪ್ ಪ್ರಕರಣವೊಂದರಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಕಾಮೆಡಿಯನ್ ಹಾಗೂ ನಟ ಕಪಿಲ್ ಶರ್ಮ ಹಾಗೂ ನಟರಾದ ಹೂಮಾ ಖುರೇಷಿ ಮತ್ತು ಹೀನಾ ಖಾನ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
ಮಹಾದೇವ್ ಆ್ಯಪ್ ನ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ನಟ ರಣಬೀರ್ ಕಪೂರ್ ಗೆ ಬುಧವಾರ ಸಮನ್ಸ್ ಜಾರಿಗೊಳಿಸಲಾಗಿತ್ತು. ಅಪರಾಧ ಪ್ರಕ್ರಿಯೆಗಳ ಮೂಲಕ ನಟ ರಣಬೀರ್ ಕಪೂರ್ ಗೆ ದೊಡ್ಡ ಮೊತ್ತವನ್ನು ಪಾವತಿಸಲಾಗಿದೆ ಎಂದು ತನಿಖಾ ಸಂಸ್ಥೆಯು ಆರೋಪಿಸಿದೆ.
ಅಂಬ್ರೆಲಾ ಸಿಂಡಿಕೇಟ್ ಆಗಿರುವ ಮಹಾದೇವ್ ಆನ್ ಲೈನ್ ಬುಕ್ ಆ್ಯಪ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ಅಕ್ರಮ ಆನ್ ಲೈನ್ ವೇದಿಕೆಗಳನ್ನು ವ್ಯವಸ್ಥೆಗೊಳಿಸುವ ಮೂಲಕ ಹೊಸ ಬಳಕೆದಾರರನ್ನು ನೋಂದಾಯಿಸಿ, ಬಳಕೆದಾರರ ಐಡಿಯನ್ನು ಸೃಜಿಸಿ ಬೇನಾಮಿ ಬ್ಯಾಂಕ್ ಖಾತೆಗಳೊಂದಿಗೆ ಸಂಪರ್ಕ ಹೊಂದಿರುವ ಹಲವಾರು ಅಂತರ್ಜಾಲ ತಾಣಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡುತ್ತಿತ್ತು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಆನ್ ಲೈನ್ ಬೆಟ್ಟಿಂಗ್ ನ ಕರಾಳ ಜಗತ್ತಿನಲ್ಲಿ ಕಪ್ಪು ಹಣದ ರೂವಾರಿಗಳಾದ ಸೌರಭ್ ಚಂದ್ರಾಕರ್ ಹಾಗೂ ರವಿ ಉಪ್ಪಲ್ ಕುಖ್ಯಾತ ಹೆಸರುಗಳಾಗಿದ್ದು, ಅವರ ಜಾಲವು ಭಾರತದಲ್ಲಿ ಮಾತ್ರವಲ್ಲದೆ ಯುಎಇ, ಶ್ರೀಲಂಕಾ, ನೇಪಾಳ ಹಾಗೂ ಪಾಕಿಸ್ತಾನಕ್ಕೂ ವಿಸ್ತರಿಸಿದೆ ಎಂದು ಹೇಳಲಾಗಿದೆ.







