ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ: ಜಂತರ್ ಮಂತರ್ ಗೆ ಭೇಟಿ ನೀಡಿದ ನಟಿ ಸ್ವರಾ ಭಾಸ್ಕರ್

Photo Credit: x/@Cockroachisback
ಹೊಸದಿಲ್ಲಿ: ಶಿಕ್ಷಣ ತಜ್ಞ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಲು ನಟಿ ಹಾಗೂ ರಾಜಕೀಯ ಹೋರಾಟಗಾರ್ತಿ ಸ್ವರಾ ಭಾಸ್ಕರ್ ಬುಧವಾರ ಇಲ್ಲಿನ ಜಂತರ್ ಮಂತರ್ಗೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಸ್ವರಾ ಭಾಸ್ಕರ್ ಭಾಗವಹಿಸಿ, ಸೋನಂ ವಾಂಗ್ಚುಕ್ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
NEET ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಅದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಕಳೆದ 26 ದಿನಗಳಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದೇ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸೋನಂ ವಾಂಗ್ಚುಕ್ ಕೈಗೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು 18ನೇ ದಿನಕ್ಕೆ ಕಾಲಿಟ್ಟಿದೆ.
ಸತತ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಅವರು ಇದುವರೆಗೆ 8.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ನಟ ನಾಸಿರುದ್ದೀನ್ ಶಾ, ಲೇಖಕಿ ಅರುಂಧತಿ ರಾಯ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಗಣ್ಯರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಸೋನಂ ವಾಂಗ್ಚುಕ್ ಅವರಿಗೆ ಮನವಿ ಮಾಡಿದ್ದಾರೆ.
ಆದರೂ, ಸೋನಂ ವಾಂಗ್ಚುಕ್ ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಇನ್ನೆರಡು ದಿನಗಳೊಳಗೆ ಅವರು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸದಿದ್ದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಹೇಳಿದೆ.
ಈ ಹಿನ್ನೆಲೆಯಲ್ಲಿ, ಸೋನಂ ವಾಂಗ್ಚುಕ್ ಅವರಿಗೆ ತುರ್ತು ವೈದ್ಯಕೀಯ ನೆರವು ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.






