ಸುಪ್ರೀಂ ಕೋರ್ಟ್ ಬಗ್ಗೆ ನಿಶಿಕಾಂತ್ ದುಬೆ ಟೀಕೆ : ಅಂತರ ಕಾಯ್ದುಕೊಂಡ ಬಿಜೆಪಿ
ಬಿಜೆಪಿ ಈ ರೀತಿಯ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದ ಜೆಪಿ ನಡ್ಡಾ

ನಿಶಿಕಾಂತ್ ದುಬೆ , ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಬಗ್ಗೆ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರ ಹೇಳಿಕೆಗೆ ಸಂಬಂಧಿಸಿ ಬಿಜೆಪಿ ಅಂತರ ಕಾಯ್ದುಕೊಂಡಿದೆ. ʼಇದು ಅವರ ವೈಯಕ್ತಿಕ ಅಭಿಪ್ರಾಯ, ಬಿಜೆಪಿ ಈ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆʼ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಸಂಸದರಾದ ನಿಶಿತಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಮತ್ತು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನೀಡಿರುವ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯ. ಬಿಜೆಪಿ ಇದನ್ನು ಒಪ್ಪುವುದಿಲ್ಲ ಅಥವಾ ಇಂತಹ ಅ ಭಿಪ್ರಾಯಗಳನ್ನು ಬೆಂಬಲಿಸುವುದೂ ಇಲ್ಲ. ಬಿಜೆಪಿ ಇವುಗಳನ್ನು ಬಲವಾಗಿ ತಿರಸ್ಕರಿಸುತ್ತದೆ ಎಂದು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸದಾ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತದೆ ಮತ್ತು ನ್ಯಾಯಾಂಗದ ಸಲಹೆ ಮತ್ತು ಆದೇಶಗಳನ್ನು ಒಪ್ಪಿಕೊಳ್ಳುತ್ತದೆ. ಏಕೆಂದರೆ ಒಂದು ಪಕ್ಷವಾಗಿ ನ್ಯಾಯಾಲಯಗಳ ಮೇಲೆ ಗೌರವ ಇದೆ. ನ್ಯಾಯಾಂಗ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಸದ ದುಬೆ ಅವರು ಲೋಕಸಭೆಯಲ್ಲಿ ಮಾತನಾಡುವ ವೇಳೆ ಸುಪ್ರೀಂಕೋರ್ಟ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಸುಪ್ರೀಂಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳನ್ನು ಮುಚ್ಚಬಹುದು ಎಂದು ಹೇಳಿಕೆ ನೀಡಿದ್ದರು.







