ಗಡಿಪಾರು ಆದೇಶ ಪ್ರಶ್ನಿಸಿದ್ದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ವಿಜಯಪುರ ಜಿಲ್ಲಾಧಿಕಾರಿ ತಮ್ಮ ವಿರುದ್ಧ ಹೊರಡಿಸಿದ್ದ ಗಡಿಪಾರು ಆದೇಶದ ವಿರುದ್ಧ ಮಹಾರಾಷ್ಟ್ರದ ಕೊಲ್ಹಾಪುರದ ಕನ್ನೇರಿಯಲ್ಲಿರುವ ಶ್ರೀ ಸಿದ್ಧಗಿರಿ ಮಠದ 49ನೇ ಮಠಾಧಿಪತಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪ್ರಸನ್ನ ಬಿ ವರಾಳೆ ಅವರ ಪೀಠ, ಕೋಮು ಸಾಮರಸ್ಯವನ್ನು ಕದಡುವ ಕೆಲವು ಹೇಳಿಕೆಗಳನ್ನು ನೀಡಲಾಗಿದೆ. ಆದ್ದರಿಂದ ಆದೇಶವನ್ನು ನೀಡಲಾಗಿದೆ ಎಂದು ಗಮನಿಸಿದೆ.
ಜಿಲ್ಲೆಯನ್ನು ಪ್ರವೇಶಿಸಲೇಬೇಕೆಂದು ಯಾಕೆ ಬಯಸುತ್ತಿದ್ದೀರಿ? ಭಾರತ ದೊಡ್ಡ ದೇಶ, ನೀವು ಬೇರೆಡೆಗೆ ಹೋಗಿ ಎಂದು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ರಾಘವೇಂದ್ರ ಶ್ರೀವಾಸ್ತವ ಅವರಿಗೆ ಪೀಠವು ಹೇಳಿದೆ.
ಆರಂಭದಲ್ಲಿ ವಿಜಯಪುರ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಅಕ್ಟೋಬರ್ 17ರಂದು ಕರ್ನಾಟಕ ಹೈಕೋರ್ಟ್ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು.
ನೀವು ಆಧ್ಯಾತ್ಮಿಕ ಮುಖಂಡರು, ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು. ಕೋಮು ಭಾವನೆಯನ್ನು ಕೆರಳಿಸುವ ಯಾವುದೇ ಭಾಷಣ ಮಾಡಬೇಡಿ ಎಂದು ಪೀಠವು ವಕೀಲರಿಗೆ ತಿಳಿಸಿದೆ.
ಎರಡು ತಿಂಗಳ ಕಾಲ ಜಿಲ್ಲೆಗೆ ಹೋಗಬೇಡಿ. ನೀವು ಈ ರೀತಿ ವರ್ತಿಸಿದರೆ, ಪ್ರತಿಯೊಬ್ಬ ಜಿಲ್ಲಾ ನ್ಯಾಯಾಧೀಶರು ನಿಮ್ಮನ್ನು ಗಡಿಪಾರು ಮಾಡುತ್ತಾರೆ ಎಂದು ನ್ಯಾಯಾಲಯವು ವಕೀಲರಿಗೆ ತಿಳಿಸಿದೆ.
ಇದು ನಿಮಗೆ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಒಳ್ಳೆಯ ಅವಕಾಶ. ನೀವು ಬೇರೆ ಮಠದಲ್ಲಿ ಕುಳಿತು ಆಧ್ಯಾತ್ಮಿಕ ಕಾರ್ಯಗಳನ್ನು ಮಾಡಬಹುದು. ಈ ಜಿಲ್ಲೆಯಲ್ಲೇ ಇರಬೇಕು ಎಂದು ಹಠ ಮಾಡುವುದು ಏಕೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ. ನಿಮ್ಮ ನಡೆ ಜನಶಾಂತಿಗೆ ಅಡ್ಡಿಯಾಗುತ್ತಿದ್ದರೆ, ಜಿಲ್ಲಾಧಿಕಾರಿ ಅಥವಾ ಆಯುಕ್ತರು ನಿಮ್ಮನ್ನು ಆ ಪ್ರದೇಶದಿಂದ ಹೊರಹಾಕುವ ಅಧಿಕಾರ ಹೊಂದಿದ್ದಾರೆ ಎಂದು ನ್ಯಾಯಾಲಯವು ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗೆ ಸ್ಪಷ್ಟಪಡಿಸಿದೆ.
ಪ್ರಕರಣವೇನು?
ಸಮಾರಂಭವೊಂದರಲ್ಲಿ ಮಾತನಾಡಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಕೆಲವು ಲಿಂಗಾಯುತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಉಂಟಾಗುವುದನ್ನು ತಡೆಯಲು ಜಿಲ್ಲಾಡಳಿತ ಕಾಡಸಿದ್ದೇಶ್ವರ ಸ್ವಾಮೀಜಿ ಜಿಲ್ಲೆ ಪ್ರವೇಶಿಸುವುದಕ್ಕೆ ಅಕ್ಟೋಬರ್ 16ರಿಂದ ಡಿಸೆಂಬರ್ 14ರ ವರೆಗೆ ನಿರ್ಬಂಧ ವಿಧಿಸಿತ್ತು.
ಇದು ತನ್ನ ಮುಕ್ತ ಸಂಚಾರ ಹಾಗೂ ಅಭಿವ್ಯಕ್ತಿಯ ಹಕ್ಕುಗಳ ಉಲ್ಲಂಘನೆ ಎಂದು ಪ್ರತಿಪಾದಿಸಿದ ಸ್ವಾಮೀಜಿ ಈ ನಿರ್ಬಂಧವನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಕರ್ನಾಟಕ ಉಚ್ಚ ನ್ಯಾಯಾಲಯ ಜಿಲ್ಲಾಡಳಿತದ ನಿರ್ಧಾರವನ್ನು ಎತ್ತಿ ಹಿಡಿದಿತ್ತು.
ಅನಂತರ ಅವರು ಜಿಲ್ಲಾಡಳಿತದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.







