ಜಾತಿ ತಾರತಮ್ಯವನ್ನು ವ್ಯಾಖ್ಯಾನಿಸಿರುವ ಯುಜಿಸಿ ನಿಯಮ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ

ಸುಪ್ರೀಂಕೋರ್ಟ್ | Photo Credit : PTI
ಹೊಸದಿಲ್ಲಿ: ಇತ್ತೀಚಿಗೆ ಅಧಿಸೂಚಿತ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ನಿಯಮವು ಜಾತಿ ತಾರತಮ್ಯದ ಕುರಿತು ಸೂಕ್ತವಲ್ಲದ ವ್ಯಾಖ್ಯಾನವನ್ನು ಅಳವಡಿಸಿಕೊಂಡಿದೆ ಮತ್ತು ಕೆಲವು ವರ್ಗಗಳನ್ನು ಸಾಂಸ್ಥಿಕ ರಕ್ಷಣೆಯಿಂದ ಹೊರಗಿರಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇತ್ತೀಚಿಗೆ ಅಧಿಸೂಚಿತ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು,2026ರ ನಿಬಂಧನೆ 3(ಸಿ) ಮೀಸಲಾತಿ ರಹಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ರಕ್ಷಿಸುವಲ್ಲಿ ವಿಫಲಗೊಂಡಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ವಿನೀತ್ ಜಿಂದಾಲ್ ಸಲ್ಲಿಸಿರುವ ಅರ್ಜಿಯು ಜಾತಿ ಆಧಾರಿತ ತಾರತಮ್ಯವನ್ನು ಪರಿಶಿಷ್ಟ ಜಾತಿಗಳು (ಎಸ್ಸಿ),ಪರಿಶಿಷ್ಟ ಪಂಗಡಗಳು (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರ ವಿರುದ್ಧ ತಾರತಮ್ಯ ಎಂದು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಿದ್ದಕ್ಕಾಗಿ ಈ ನಿಬಂಧನೆಯನ್ನು ಟೀಕಿಸಿದೆ.
ಜಾತಿ ಆಧಾರಿತ ತಾರತಮ್ಯದ ವ್ಯಾಪ್ತಿಯನ್ನು ಎಸ್ಸಿ,ಎಸ್ಟಿ ಮತ್ತು ಒಬಿಸಿ ವರ್ಗಗಳಿಗೆ ಮಾತ್ರ ಸೀಮಿತಗೊಳಿಸುವ ಮೂಲಕ ಯುಜಿಸಿಯು ತಮ್ಮ ಜಾತಿ ಗುರುತಿನ ಆಧಾರದಲ್ಲಿ ಕಿರುಕುಳ ಅಥವಾ ತಾರತಮ್ಯವನ್ನು ಎದುರಿಸಬಹುದಾದ ಸಾಮಾನ್ಯ ಅಥವಾ ಮೀಸಲಾತಿರಹಿತ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಸಾಂಸ್ಥಿಕ ರಕ್ಷಣೆ ಮತ್ತು ಅವರ ಕುಂದುಕೊರತೆಗಳಿಗೆ ಪರಿಹಾರವನ್ನು ನಿರಾಕರಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ನಿಬಂಧನೆಯು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 51(1)(ಧರ್ಮ,ಜನಾಂಗ,ಜಾತಿ,ಲಿಂಗ ಅಥವಾ ಜನ್ಮಸ್ಥಳದ ಆಧಾರದಲ್ಲಿ ಸರಕಾರದಿಂದ ತಾರತಮ್ಯ ನಿಷೇಧ) ಅಡಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿರುವ ಅರ್ಜಿಯು,ನಿಬಂಧನೆಯು ಸಂವಿಧಾನದ 21ನೇ ವಿಧಿಯನ್ನೂ(ಘನತೆಯಿಂದ ಬದುಕುವ ಹಕ್ಕು ಸೇರಿದಂತೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಅಧಿಕಾರಿಗಳು ನಿಬಂಧನೆ 3(ಸಿ) ಅನ್ನು ಅದರ ಪ್ರಸ್ತುತ ರೂಪದಲ್ಲಿ ಜಾರಿಗೊಳಿಸುವುದನ್ನು ನಿರ್ಬಂಧಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿರುವ ಅರ್ಜಿದಾರರು,ಜಾತಿ ತಟಸ್ಥ ಮತ್ತು ಸಂವಿಧಾನಕ್ಕೆ ಅನುಗುಣವಾದ ರೀತಿಯಲ್ಲಿ ಜಾತಿ ಆಧಾರಿತ ತಾರತಮ್ಯದ ಮರುವ್ಯಾಖ್ಯಾನಕ್ಕೆ ನಿರ್ದೇಶವನ್ನು ಕೋರಿದ್ದಾರೆ. ನಿರ್ದಿಷ್ಟ ಜಾತಿ ಗುರುತನ್ನು ಪರಿಗಣಿಸದೆ ಜಾತಿ ಆಧಾರದಲ್ಲಿ ತಾರತಮ್ಯಕ್ಕೊಳಗಾಗಿರುವ ಎಲ್ಲ ವ್ಯಕ್ತಿಗಳಿಗೆ ರಕ್ಷಣೆಯನ್ನು ಒದಗಿಸುವಂತೆ ಜಾತಿ ಆಧಾರಿತ ತಾರತಮ್ಯವನ್ನು ಮರುವ್ಯಾಖ್ಯಾನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವ್ಯಾಖ್ಯಾನದ ಔಪಚಾರಿಕ ಮರುಪರಿಶೀಲನೆ ಬಾಕಿಯಿರುವಂತೆ,ನೂತನ ನಿಯಮಾವಳಿಗಳಡಿ ಸ್ಥಾಪಿಸಲಾಗಿರುವ ‘ಸಮಾನ ಅವಕಾಶ ಕೇಂದ್ರಗಳು’,ಸಮಾನತೆ ಸಹಾಯವಾಣಿಗಳು’ ಮತ್ತು ‘ಓಂಬುಡ್ಸ್ ಪರ್ಸನ್ (ಪರಿಹಾರಾಧಿಕಾರಿ)’ ಕಾರ್ಯವಿಧಾನಗಳನ್ನು ಭೇದಭಾವವಿಲ್ಲದ ರೀತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಲಭ್ಯವಾಗಿಸಲು ಕೇಂದ್ರ ಸರಕಾರ ಮತ್ತು ಯುಜಿಸಿಗೆ ಮಧ್ಯಂತರ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.







