ಮತದಾನ, ಚುನಾವಣೆಯಲ್ಲಿ ಸ್ಪರ್ಧಿಸುವುದು ಮೂಲಭೂತ ಹಕ್ಕುಗಳಲ್ಲ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ, ಎ. 11: ಮತ ಚಲಾಯಿಸುವುದು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮೂಲಭೂತ ಹಕ್ಕು ಅಲ್ಲ; ಬದಲಿಗೆ ಅದು ಶಾಸನಬದ್ಧ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ಪುನರುಚ್ಚರಿಸಿದೆ.
ಶುಕ್ರವಾರ ರಾಜಸ್ಥಾನದ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟಗಳಿಗಾಗಿ ಚುನಾವಣಾ ನಿಯಮಗಳ ಕುರಿತು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಆರ್. ಮಹಾದೇವನ್ ಅವರ ಪೀಠ, ಈ ಹಕ್ಕುಗಳು ಶಾಸನದಲ್ಲಿ ತಿಳಿಸಲಾಗಿರುವ ಮಟ್ಟಿಗೆ ಮಾತ್ರ ಅಸ್ತಿತ್ವದಲ್ಲಿವೆ ಎಂದು ತಿಳಿಸಿತು.
ಈ ಹಕ್ಕುಗಳು ಪರಸ್ಪರ ಭಿನ್ನವಾಗಿವೆ ಎಂದು ತಿಳಿಸಿದ ಪೀಠ, ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಅರ್ಹತೆಗಳು, ಅನರ್ಹತೆಗಳು ಹಾಗೂ ಸಾಂಸ್ಥಿಕ ಅಗತ್ಯಗಳಂತಹ ಕಠಿಣ ನಿಯಮಗಳಿಗೆ ಒಳಪಟ್ಟಿದೆ ಎಂದು ಹೇಳಿತು.
ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಪೀಠ, ಇಂತಹ ಹಕ್ಕುಗಳು ಸಂಪೂರ್ಣವಾಗಿ ಶಾಸನಬದ್ಧ ಸ್ವರೂಪದ್ದಾಗಿದ್ದು, ಶಾಸನದಲ್ಲಿ ತಿಳಿಸಿರುವ ಮಟ್ಟಿಗೆ ಮಾತ್ರ ಅಸ್ತಿತ್ವದಲ್ಲಿವೆ ಎಂದು ಸರ್ವೋಚ್ಚ ನ್ಯಾಯಾಲಯ ಈ ಮೊದಲು ಎತ್ತಿಹಿಡಿದಿದೆ ಎಂದು ತಿಳಿಸಿತು.




