ಪೊಕ್ಸೊ ಕಾಯ್ದೆಯನ್ನು ದುರುಪಯೋಗಪಡಿಸಲಾಗುತ್ತಿದೆ : ಸುಪ್ರೀಂಕೋರ್ಟ್ ಕಳವಳ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ,ನ.4: ವೈವಾಹಿಕ ವೈಮನಸ್ಸು ಹಾಗೂ ಹದಿಹರೆಯದವರ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಪೋಕ್ಸೊ ಕಾಯ್ದೆಯ ಕಾನೂನಾತ್ಮಕ ನಿಯಮಗಳ ಕುರಿತು ಬಾಲಕರು ಹಾಗೂ ಪುರುಷರಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆಯೆಂದು ಅದು ಹೇಳಿದೆ.
ಅತ್ಯಾಚಾರದ ಕೃತ್ಯಕ್ಕೆ ವಿಧಿಸಲಾಗುವ ದಂಡನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ನಿರ್ದೇಶನವನ್ನು ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಆಲಿಕೆಯನ್ನು ನಡೆಸಿ ಸಂದರ್ಭ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
‘‘ವೈವಾಹಿಕ ಬಿಕ್ಕಟ್ಟು ಹಾಗೂ ಹದಿಹರೆಯದವರ ನಡುವಿನ ಸಮ್ಮತಿಯ ಸಂಬಂಧದ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಾಲಕರು ಹಾಗೂ ಪುರುಷರಲ್ಲಿ ಕಾನೂನಾತ್ಮಕ ನಿಯಮಗಳ ಬಗ್ಗೆ ಜಾಗೃತಿಯನ್ನು ನಾವು ಹರಡಬೇಕಾಗಿದೆ ಎಂದು ನ್ಯಾಯಪೀಠವು ಮೌಖಿಕವಾಗಿ ತಿಳಿಸಿದೆ.
ಈ ವಿಷಯವಾಗಿ ತಾನು ನೀಡಿದ್ದ ನೋಟಿಸ್ಗೆ ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಉತ್ತರಿಸಿಲ್ಲವೆಂಬ ಬಗ್ಗೆ ಗಮನಸೆಳೆದ ಸರ್ವೋಚ್ಚ ನ್ಯಾಯಾಲಯವು ಮುಂದಿನ ಆಲಿಕೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.
ಹಿರಿಯ ನ್ಯಾಯವಾದಿ ಆಬಾದ್ ಹರ್ಷದ್ ಪೊಂಡಾ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯವು, ಈ ಮೊದಲು ಕೇಂದ್ರ ಸರಕಾರ, ಮಾಹಿತಿ ತಂತ್ರಜ್ಞಾನ ಹಾಗೂ ಪ್ರಸಾರ ಸಚಿವಾಲಯ ಹಾಗೂ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ)ಗೆ ನೋಟಿಸ್ ಜಾರಿಗೊಳಿಸಿತ್ತು.
ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ ಹಾಗೂ ನಿರ್ಭಯಾ ಪ್ರಕರಣದ ಬಳಿಕ ಇಂತಹ ಕಾನೂನುಗಳಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಪೊಂಡಾ ತಿಳಿಸಿದ್ದಾರೆ.
ಮಹಿಳೆಯರು ಹಾಗೂ ಮಕ್ಕಳ ಕುರಿತಾದ ಅಪರಾಧಗಳಿಗೆ ಇರುವ ದಂಡನಾತ್ಮಕ ಕಾನೂನುಗಳ ಕುರಿತಾಗಿ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.







