‘ಒಂದು ಪ್ರಕರಣ, ಒಂದು ದತ್ತಾಂಶ’ ಎಐ ಚಾಟ್ಬಾಟ್ ‘ಸು ಸಹಾಯ’ ಘೋಷಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಮೇ 11: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ದತ್ತಾಂಶ ಏಕೀಕರಣವನ್ನು ಬಲಗೊಳಿಸುವ ಮತ್ತು ಸಾರ್ವಜನಿಕರಿಗೆ ನ್ಯಾಯಾಲಯ ಸೇವೆಗಳ ಲಭ್ಯತೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿರುವ ‘ಒಂದು ಪ್ರಕರಣ ಒಂದು ದತ್ತಾಂಶ(One Case One Data)’ ಮತ್ತು ‘ಸು ಸಹಾಯ’ ಡಿಜಿಟಲ್ ಉಪಕ್ರಮವನ್ನು ಸೋಮವಾರ ಪ್ರಕಟಿಸಿದರು.
ಸರ್ವೋಚ್ಚ ನ್ಯಾಯಾಲಯದ ಕಲಾಪದ ಆರಂಭದಲ್ಲಿ ಈ ವಿಷಯವನ್ನು ಪ್ರಕಟಿಸಿದ ಸಿಜೆಐ, ‘ಒಂದು ಪ್ರಕರಣ ಒಂದು ದತ್ತಾಂಶ’ದ ಮೂಲಕ ಎಲ್ಲ ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲೂಕು ನ್ಯಾಯಾಲಯಗಳಿಂದ ಬಹು ಹಂತಗಳ ಮಾಹಿತಿಗಳನ್ನು ಏಕೀಕೃತ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗುವುದು ಎಂದು ತಿಳಿಸಿದರು.
ಈ ಉಪಕ್ರಮವು ದೇಶದ ನ್ಯಾಯಾಲಯಗಳಾದ್ಯಂತ ಹೆಚ್ಚು ಸಮಗ್ರ ಹಾಗೂ ಅಂತರ್ ಸಂಪರ್ಕಿತ ಡಿಜಿಟಲ್ ಡೇಟಾಬೇಸ್ ಅನ್ನು ರಚಿಸುವ ಮೂಲಕ ಪ್ರಕರಣಗಳ ನಿರ್ವಹಣೆಯನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.
ನ್ಯಾಷನಲ್ ಇನ್ಫಾರ್ಮಾಟಿಕ್ಸ್ ಸೆಂಟರ್ ಮತ್ತು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಸಹಯೋಗದೊಂದಿಗೆ ಅಭಿವೃದ್ಧಿಗೊಳಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ‘ಸು ಸಹಾಯ’ ಚಾಟ್ಬಾಟ್ನ ಆರಂಭವನ್ನೂ ಸಿಜೆಐ ಘೋಷಿಸಿದರು. ಇದು ಸುಪ್ರೀಂ ಕೋರ್ಟ್ ವೆಬ್ಸೈಟ್ನೊಂದಿಗೆ ಸಂಯೋಜಿತವಾಗಿದ್ದು, ದಾವೆದಾರರಿಗೆ ನ್ಯಾಯ ಮತ್ತು ನ್ಯಾಯಾಲಯ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲಿಸುತ್ತದೆ.
ಇದು ನಾಗರಿಕರಿಗೆ ಸುಪ್ರೀಂ ಕೋರ್ಟ್ನ ಅಗತ್ಯ ಸೇವೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಸರಳ ಮತ್ತು ಅನುಕೂಲಕರ ಇಂಟರ್ಫೇಸ್ ಅನ್ನು ಒದಗಿಸುತ್ತದೆ ಎದು ಸಿಜೆಐ ತಿಳಿಸಿದರು.






