ಆಸಾರಾಮ್ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಬಳಿಕ ಬೆಂಬಲಿಗರಿಂದ ಬೆದರಿಕೆ: ʼಡಿಸ್ಕವರಿ ಚಾನೆಲ್ʼ ಸಿಬ್ಬಂದಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಸ್ವಘೋಷಿತ ದೇವಮಾನವ ಆಸಾರಾಮ್ ಕುರಿತು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಡಿಸ್ಕವರಿ ಕಮ್ಯುನಿಕೇಷನ್ಸ್ ಇಂಡಿಯಾ ಚಾನೆಲ್‌ನ ಅಧಿಕಾರಿಗಳು ಮತ್ತು ಆಸ್ತಿಗಳಿಗೆ ಗುರುವಾರ ಮಧ್ಯಂತರ ಪೋಲಿಸ್ ರಕ್ಷಣೆಯನ್ನು ಮಂಜೂರು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾ.ಸಂಜಯ್ ಕುಮಾರ್ ಅವರ ಪೀಠವು ಡಿಸ್ಕವರಿ ಇಂಡಿಯಾದ ಹಿರಿಯ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ‘ಕಲ್ಟ್ ಆಫ್ ಫಿಯರ್-ಆಸಾರಾಮ ಬಾಪು’ ಶೀರ್ಷಿಕೆಯ ಸಾಕ್ಷ್ಯಚಿತ್ರದ ಬಿಡುಗಡೆಯ ಬಳಿಕ ಚಾನೆಲ್‌ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಡಿಸ್ಕವರಿ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಹಲವಾರು ದ್ವೇಷಪೂರಿತ ಕಮೆಂಟ್‌ಗಳು ಬಂದಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಅಭಿನವ ಮುಖರ್ಜಿಯವರು,‘ನನ್ನ ಕಕ್ಷಿದಾರರು ದೇಶಾದ್ಯಂತ ಮುಕ್ತವಾಗಿ ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಪೋಲಿಸರು ಏನೂ ಮಾಡಿಲ್ಲ. ನಾವು ಉದ್ಯೋಗಿಗಳ ಮನೆಗಳಿಗೆ ತೆರಳಿ ಕೆಲಸಕ್ಕೆ ಬರದಂತೆ ಅವರಿಗೆ ಸೂಚಿಸಿದ್ದೇವೆ. ಈಗ ನಮಗೆ ಸಾಮೂಹಿಕ ಆಂದೋಲನದ ಬೆದರಿಕೆಯ ಪತ್ರವೂ ಬಂದಿದೆ. ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು 2018ರಲ್ಲಿ ಮಾರ್ಗಸೂಚಿಯನ್ನು ನಿಗದಿಪಡಿಸಿದೆ ’ಎಂದು ಹೇಳಿದರು.
ಮುಖರ್ಜಿಯವರ ವಾದವನ್ನು ಆಲಿಸಿದ ಪೀಠವು ಅರ್ಜಿದಾರರಿಗೆ ಮಧ್ಯಂತರ ರಕ್ಷಣೆಯನ್ನು ಒದಗಿಸುವಂತೆ ಪೋಲಿಸರಿಗೆ ನಿರ್ದೇಶನವನ್ನು ನೀಡಿತು. ಸಂವಿಧಾನದ ವಿಧಿ 32ರಡಿ ಸಲ್ಲಿಸಲಾದ ಅರ್ಜಿಯಲ್ಲಿ ಕೇಂದ್ರ ಸರಕಾರ,ಕರ್ನಾಟಕ,ಮಹಾರಾಷ್ಟ್ರ,ಪ.ಬಂಗಾಳ,ದಿಲ್ಲಿ,ಹರ್ಯಾಣ ಮತ್ತು ತೆಲಂಗಾಣ ರಾಜ್ಯಗಳು ಹಾಗೂ ಅವುಗಳ ಪೋಲಿಸ್ ಮುಖ್ಯಸ್ಥರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.
ಆಸಾರಾಮ ಬಾಪು ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಒಟಿಟಿ ಪ್ಲ್ಯಾಟ್‌ಫಾರ್ಮ್ ಡಿಸ್ಕವರಿ+ ನಲ್ಲಿ ಸಾಕ್ಷ್ಯಚಿತ್ರವು ಬಿಡುಗಡೆಗೊಂಡ ಬಳಿಕ ತಮಗೆ ಬೆದರಿಕೆಗಳು ಬಂದಿವೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಜ.30ರಂದು ತಮ್ಮ ಮುಂಬೈ ಕಚೇರಿಯ ಹೊರಗೆ ಗುಂಪೊಂದು ಜಮಾಯಿಸಿ ಗದ್ದಲವನ್ನೆಬ್ಬಿಸಿತ್ತು. ಪೋಲಿಸರು ಜನರನ್ನು ಚದುರಿಸಿದ್ದರಾದರೂ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.







